ಆಳಂದ ಗ್ರಾಮದೇವರಾದ ಶ್ರೀ ಹನುಮಂತ 
ರಾಜ್ಯ

ಆಳಂದದನಲ್ಲಿ ಶ್ರೀ ಹನುಮ ರಥೋತ್ಸವ 2ರಂದು

ಆಳಂದ: ಗ್ರಾಮ ದೇವರು ಹಾಗೂ ಪಟ್ಟಣದ ಶ್ರೀ ಹನುಮಾನ ದೇವಸ್ಥಾನದಲ್ಲಿ ಹನುಮಾನ ಜಯಂತಿ ಮತ್ತು 95ನೇ ಜಾತ್ರೋತ್ಸವ ಏ.2ರಂದು ಸಂಭ್ರಮದಿಂದ ನಡೆಯಲಿದೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ. ಜಾತ್ರೆ ನಿಮಿತ್ತ ಈಗಾಗಲೇ ಮಾ.26ರಿಂದ ಅಖಂಡ ನಾಮ ಸಪ್ತಾಹ ಹಾಗೂ ನಿತ್ಯ ರಾತ್ರಿ 9ಕ್ಕೆ ಬೃಹತ್​ ಸ್ಕ್ರೀನ್​ ಅಲ್ಲಿ ರಾಮಾಯಣ ದರ್ಶನಂ ಪೌರಾಣಿಕ ಕಲೆ ಪ್ರದರ್ಶನ ನಡೆಯುತ್ತಿದೆ. ಏ.2ರಂದು ನಸುಕಿನ ಜಾವ 5.30ಕ್ಕೆ ಶ್ರೀ ಬಾಲ ಹನುಮಂತನ ತೊಟ್ಟಲು ಮತ್ತು ಜನ್ಮೋತ್ಸವ ಜರುಗಲಿದೆ. ಮಧ್ಯಾಹ್ನ 1.30ಕ್ಕೆ ಪ್ರಮುಖ ಬೀದಿಗಳಲ್ಲಿ ನಂದಿಕೋಲು, ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಮಹಾರಥೋತ್ಸವ ಜರುಗಲಿದೆ. ಏ.2, 3ರಂದು ಶರಣಬಸಪ್ಪ ಕೆ. ಮಾಸ್ತರ್​, ಹರದೇಶಿ ಗೀಗೀ ಮೇಳ ನದಿಸಿನ್ನೂರ ಮತ್ತು ರೇಣುಕಾಬಾಯಿ ತಂಡದ ಫಕೀರಪ್ಪ ಐವಳೆ, ನಾಗೇಶಿ ಅವರಿಂದ ಗೀಗೀ ಪದಗಳು ನಡೆಯಲಿವೆ. ಏ.2ರಂದು ಆಳಂದನ ಯುವ ತರುಣ ಮಂಡಳಿಯ ಅಣ್ಣನ ಅರಮನೆ (ಉತ್ತರ ಕರ್ನಾಟಕದ ಹುಲಿ), ಏ.3ರಂದು ಮಾನವರ ಮನೆತನದಲ್ಲಿ (ಋಣ ತೀರಿಸಿದ ರುದ್ರ), ಏ.4ರಂದು ಅಣ್ಣನ ಅರಮನೆ ನಾಟಕ ಪ್ರದರ್ಶನ ನಡೆಯಲಿದೆ. ಏ.3ರಂದು ಸಂಜೆ 4ಕ್ಕೆ ಕುಸ್ತಿ ಪಂದ್ಯ ಜರುಗಲಿವೆ. ರಾತ್ರಿ 8ಕ್ಕೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಏ.5ರಂದು ಬಸವರಾಜ ಗಂಗನಳ್ಳಿ, ಸಿಂದಗಿ ಅವರ ಸಾರಥ್ಯದ ರೇಣುಕಾ ಯಲ್ಲಮ್ಮ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.