ಬಾಗಲಕೋಟೆಯಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. ಶಾಸಕ ಉಮೇಶ ಮೇಟಿ, ನಾಗರಾಜ ಹದ್ಲಿ, ಎಸ್.ಎನ್.ರಾಂಪೂರ ಮತ್ತಿತರರು ಇದ್ದರು. 
ರಾಜ್ಯ

ಎಸ್‌ಐಆರ್ ಬಗ್ಗೆ ಕೆಪಿಸಿಸಿಯಿಂದ ತರಬೇತಿ

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಪರವಾಗಿರುವ ಮತದಾರರನ್ನು ಎಸ್‌ಐಆರ್ ಮೂಲಕ ಹೊರಗಿಡುವ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಈ ಬಗ್ಗೆ ಹೆಚ್ಚಿನ ನಿಗಾವಹಿಸಿ, ಎಸ್‌ಐಆರ್ ಬಗ್ಗೆ ಸಮಗ್ರ ಮಾಹಿತಿ ನೀಡಲು ನಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರಿಗೆ ಜೂ. ೧೨ ರಂದು ಕೆಪಿಸಿಸಿ ವತಿಯಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. ೧೨ ರಂದು ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆ ೧೦.೩೦ಕ್ಕೆ ತರಬೇತಿ ನಡೆಯಲಿದೆ. ಪ್ರತಿ ಬೂತ ಮತ್ತು ಬ್ಲಾಕ್ ಗಳಿಂದ ನಿಗದಿತ ಪದಾಽಕಾರಿಗಳಿಗೆ ತರಬೇತಿ ನೀಡಲಾಗುವುದು. ಅದಾದ ಬಳಿಕ ಪ್ರತಿ ಬೂತ ಅಧ್ಯಕ್ಷರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹಿಂದೆ ಯಾರೊಬ್ಬರೂ ಮತದಾನದಿಂದ ದೂರ ಉಳಿಯಬಾರದೆಂದು ಮತದಾರರ ಪಟ್ಟಿಗೆ ಸೇರಿಸುವ ರಾಜಕಾರಣ ಇತ್ತು. ಆದರೆ, ಇವತ್ತು ಮತದಾರರ ಪಟ್ಟಿಯಿಂದ ಹೊರಗಿಟ್ಟು ಅವರ ಮತದಾನದ ಹಕ್ಕು ಕಸಿದುಕೊಳ್ಳುವ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರನ್ನು ಪಟ್ಟಿಯಿಂದ ದೂರ ಮಾಡಲಾಯಿತು. ನುಸುಳುಕೋರರನ್ನು ಹೊರಗಿಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಕಾಂಗ್ರೆಸ್ ಪರವಾಗಿರುವ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದ ಮತದಾರನ್ನು ಕೈಬಿಡುವ ವ್ಯವಸ್ಥಿತ ಹುನ್ನಾರ ನಡೆದಿರುವ ಬಗ್ಗೆ ನಮಗೆ ಅನುಮಾನ ಇದೆ. ಈ ಹಿನ್ನೆಲೆಯಲ್ಲಿ ಅಂಥದ್ದಕ್ಕೆ ಅವಕಾಶ ನೀಡದೇ ತೀವ್ರ ನಿಗಾ ವಹಿಸುವಂತೆ ನಮ್ಮ ಕಾರ್ಯಕರ್ತರನ್ನು ಜಾಗೃತಗೊಳಿಸುವ ಕೆಲಸವನ್ನು ಪಕ್ಷ ಮಾಡುತ್ತಿದೆ ಎಂದರು.
ಮುಖAಡ ಚಂದ್ರಶೇಖರ ರಾಠೋಡ ಮಾತನಾಡಿ, ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಮುಂದಾಗಿದೆ. ಇದಕ್ಕೆ ಚುನಾವಣಾ ಆಯೋಗವೂ ಸಹ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಒಂದು ವಿಭಾಗದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ೯೭ ಲಕ್ಷ ಮತದಾರರನ್ನು ಎಸ್‌ಐಆರ್ ಹೆಸರಿನಲ್ಲಿ ಕೈಬಿಡಲಾಗಿದೆ. ೨೭ ಲಕ್ಷ ಮತದಾರನ್ನು ಪ್ರಶ್ನಾರ್ಥಕವಾಗಿಟ್ಟು, ಅವರ ಬಗ್ಗೆ ಯಾವುದೇ ತೀರ್ಪು ತೆಗೆದುಕೊಳ್ಳುವ ಮುನ್ನವೇ ಚುನಾವಣೆ ನಡೆಸಿ, ಗೆದ್ದು ಬೀಗಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕರ್ನಾಟಕವನ್ನು ಟಾರ್ಗೇಟ್ ಮಾಡಿಕೊಂಡಿದ್ದು, ರಾಜ್ಯದ ೯೦ ವಿಧಾನಸಭೆ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಎಸ್‌ಐಆರ್‌ಗೆ ಮುಂದಾಗಿದೆ. ಹಾಗೆಯೇ ಬಾಗಲಕೋಟೆ ಜಿಲ್ಲೆಯ ೭ ವಿಧಾನಸಭೆ ಕ್ಷೇತ್ರಗಳ ಪೈಕಿ ೫ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕುವ ಸಂಚು ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಉಮೇಶ ಮೇಟಿ, ಮುಖಂಡರಾದ ನಾಗರಾಜ ಹದ್ಲಿ, ಎಸ್.ಎನ್.ರಾಂಪೂರ, ಶ್ರೀನಿವಾಸ ಬಳ್ಳಾರಿ, ಅಕ್ಬರ್ ಮುಲ್ಲಾ, ರಾಜು ಮನ್ನಿಕೇರಿ ಇದ್ದರು.