ಸಿ.ಎಸ್.ಆನಂದ 
ರಾಜ್ಯ

ದೂರದರ್ಶನ ಚಂದನ ವಾಹಿನಿಯಲ್ಲಿ - ಸಿ.ಎಸ್.ಆನಂದ

ಕಲಬುರಗಿ: ಕನ್ನಡ ಸಾರಸ್ವತ ಲೋಕದಲ್ಲಿ ಪ್ರಮುಖ ಕವಿ,ಕಥೆಗಾರ ಮತ್ತು ವಿಮರ್ಶಕರಾಗಿರುವ ಸಿ.ಎಸ್.ಆನಂದ ಅವರು ದಿನಾಂಕ 10-03-2026 ರಂದು ಮಂಗಳವಾರ ಬೆಳಗ್ಗೆ 8: ೦೦ ಘಂಟೆಗೆ ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಶುಭೋದಯ ಕರ್ನಾಟಕ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ವೃತ್ತಿಯಿಂದ ಇಂಗ್ಲಿಷ್ ಭಾಷಾ ಪ್ರಾಧ್ಯಾಪಕರಾದ ಆನಂದ ಅವರು ಪ್ರವೃತ್ತಿಯಿಂದ ಸಾಹಿತಿಯಾಗಿ ಈವರೆಗೆ ಹದಿನೈದಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರು ರಚಿಸಿದ ಕವಿತೆ ಮತ್ತು ಕಥೆಗಳು ನಾಡಿನ ಅನೇಕ ಸಂಘ - ಸಂಸ್ಥೆಗಳು ಆಯೋಜಿಸುವ ರಾಜ್ಯಮಟ್ಟದ ಕಾವ್ಯ - ಕಥಾ ಸ್ಪರ್ಧೆಗಳಲ್ಲಿ ಪ್ರಶಸ್ತಿ, ನಗದು ಬಹುಮಾನ ಮತ್ತು ಮೆಚ್ಚುಗೆ ಪಡೆದಿವೆ . ಹಾಗೆಯೇ ಅನೇಕ ಕವಿತೆ, ಕಥೆ ಮತ್ತು ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿಶೇಷವಾಗಿ ಇವರ ಹಲವು ಬರಹಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಪಠ್ಯವಿಷಯಗಳಾಗಿ ಬೋಧನೆಗೆ ಆಯ್ಕೆಯಾಗಿವೆ. ಸೃಜನಶೀಲ ಬರಹಗಾರರಾಗಿ ನಾಡಿನ ವಿಮರ್ಶಕರ , ಚಿಂತಕರ ಮತ್ತು ವಿದ್ವಾಂಸರ ಗಮನ ಸೆಳೆದಿರುವ ಇವರು ಸಾವಿರಾರು ಓದುಗಪ್ರಿಯರನ್ನು ಸಂಪಾದಿಸಿದ್ದಾರೆ. ಆನಂದ ಅವರು ಉತ್ತಮ ವಾಗ್ಮಿಯಾಗಿ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಜರುಗುವ ಸಾಹಿತ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ವಿದ್ವತ್ಪೂರ್ಣ ಭಾಷಣ, ಉಪನ್ಯಾಸ, ಕಥೆ ಮತ್ತು ಕವಿತೆ ವಾಚನ ಮಾಡುವುದರ ಮೂಲಕ ಅಪಾರ ಸಂಖ್ಯೆಯ ಸಾಹಿತ್ಯ ಬಳಗ ಹೊಂದಿದ್ದಾರೆ.