ನಡುವಿನ ಕೆರೆಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ ಆವರಣದಲ್ಲಿ ಪಾಳೇಗಾರ ಕಾಲದ ಅಪ್ರಕಟಿತ ಶಾಸನ ಪತ್ತೆಯಾಗಿರುವುದು.
ಹರಪನಹಳ್ಳಿ: ನಗರದ ನಡುವಿನ ಕೆರೆಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ ಆವರಣದಲ್ಲಿ ಪಾಳೇಗಾರ ಕಾಲದ ಅಪ್ರಕಟಿತ ಶಾಸನ ಪತ್ತೆಯಾಗಿದೆ. ದೇವಸ್ಥಾನ ಪ್ರಾಕಾರದ ದಕ್ಷಿಣ ಭಾಗದಲ್ಲಿ ಕಂಡುಬಂದಿರುವ ಈ ಶಾಸನವು 16ನೇ ಶತಮಾನದ್ದು ಆಗಿರಬಹುದೆಂದು ಅಂದಾಜಿಸಲಾಗಿದೆ.
ನೀಲಿ ಮಿಶ್ರಿತ ಗ್ರಾನೈಟ್ ಕಲ್ಲಿನಲ್ಲಿ ಹಳೆಗನ್ನಡ ಲಿಪಿಯಲ್ಲಿ ಕೆತ್ತಲಾಗಿದ್ದು, ಒಂದುವರೆ ಅಡಿ ಅಗಲ, ಮೂರೂವರೆ ಅಡಿ ಉದ್ದ, 24 ಇಂಚು ದಪ್ಪ ಇದ್ದು, 24 ಸಾಲುಗಳಿಂದ ರಚಿಸಲಾಗಿದೆ. ಆರಂಭದ ಸಾಲಿನಲ್ಲಿ ಶಿವ ಸ್ತುತಿ ಇದೆ. ಅಕ್ಷರದಲ್ಲಿ ಸಾವಿರದ ಐದುನೂರಾ ಇಪ್ಪತ್ತನಾಲ್ಕು ಎಂದಿದ್ದು, ಇದಕ್ಕೆ 78 ಸೇರಿಸಲಾಗಿದೆ.
ಸಾಮಾನ್ಯ ಶಕೆ 1602ರಕ್ಕೆ ಸರಿ ಹೊಂದುತ್ತದೆ. ಸೂರ್ಯ, ಚಂದ್ರ, ಶಿವಲಿಂಗ, ನಂದಿ, ಹಸು, ಮತ್ತು ಕರುವಿನ ಚಿತ್ತಾರವಿದೆ.
ಬಾಗಳಿ ಬಸಪ್ಪನಾಯಕನ ಕಾಲಾವಧಿಯಲ್ಲಿ ವೈಷ್ಣವ ಪಂಥದಿಂದ ಬಸವಂತ ನಾಯಕನ ಒತ್ತಾಯದ ಮೇರೆಗೆ ಶೈವ ಪರಂಪರೆಗೆ ಸೇರಿಕೊಂಡಿರುವ ಬಗ್ಗೆ ಉಲ್ಲೇಖವಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಹಿರಿಯ ಇತಿಹಾಸ ಪ್ರಾಧ್ಯಾಪಕ ಎಂ. ಕೊಟ್ರೇಶ್ ತಿಳಿಸಿದ್ದಾರೆ.