ವಿಜಯಪುರಕ್ಕೆ ಸರಬರಾಜಾಗುತ್ತಿರುವ ಕಲುಷಿತಗೊಂಡ ನೀರು.
ವಿಜಯಪುರ : ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಓವರ್ಹೆಡ್ ಟ್ಯಾಂಕ್ ಮೂಲಕ ಕಲುಷಿತ ನೀರು ಸರಬರಾಜು ಆಗಿರುವ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಚಿಕ್ಕಬಳ್ಳಾಪುರ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸಂದರ್ಭದಲ್ಲಿ ನೀರು ಸರಬರಾಜು ಪೈಪ್ಗೆ ಹಾನಿಯಾಗಿರುವುದರಿಂದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿರುವುದು ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ. ಕೂಡಲೇ ಮಣ್ಣು ಮಿಶ್ರಿತ ನೀರು ಹೊರ ತೆಗೆದು ಟ್ಯಾಂಕ್ ಸ್ವಚ್ಛಗೊಳಿಸಿ ಶುದ್ಧ ನೀರು ಸರಬರಾಜು ಮಾಡಲು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ಥಳದಲ್ಲೆ ಸೂಚಿಸಿದರು. ನಂತರ ವಿಜಯಪುರ ಪಟ್ಟಣದಲ್ಲಿ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪಟ್ಟಣದಲ್ಲಿ ಸದ್ಯಕ್ಕೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನೆಲ್ಲ ಬದಿಗೆ ಸರಿಸಿ ಮೊದಲು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಿ. ನೀರು ಸರಬರಾಜಿಗೆ ತೊಂದರೆ ತರುವ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡುವುದಿಲ್ಲ. ಪಟ್ಟಣದ ಎಲ್ಲ ನೀರಿನ ಟ್ಯಾಂಕುಗಳು ಮತ್ತು ಸಂಪುಗಳನ್ನು ತಕ್ಷಣವೇ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ನೀರಿನ ಟ್ಯಾಂಕುಗಳು ಸರಿಯಾಗಿ ಸ್ವಚ್ಛವಾಗಿರದಿದ್ದರೆ, ನೀರಿನಲ್ಲಿ ಪುನ@ ಮಣ್ಣು ಮಿಶ್ರಣವಾಗಿರುವುದು ಕಂಡುಬಂದರೆ ಸಂಬಂಧಿತ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಮಳೆ&ಬೆಳೆ, ಮೇವಿನ ಮಾಹಿತಿ: ಈ ವೇಳೆ ಜಿಲ್ಲೆಯ ಕೃಷಿ ಚಟುವಟಿಕೆಗಳ ಬಗ್ಗೆಯೂ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.7ರಷ್ಟು ಹೆಚ್ಚಿನ ಮಳೆಯಾಗಿದೆ. ಹೀಗಾಗಿ ಬಿತ್ತನೆ ಪ್ರಕ್ರಿಯೆ ಸ್ವಲ್ಪ ತಡವಾಗಿ ಆರಂಭವಾಗಲಿದೆ. ಮಳೆ ವಿಳಂಬವಾದರೂ ರೈತರಿಗೆ ತೊಂದರೆಯಾಗದಂತೆ ಪರ್ಯಾಯವಾಗಿ ಬೇರೆ ಬೇರೆ ತಳಿಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಲ್ಲಿ ಸಂಗ್ರಹಿಸಿಡಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ರಾಸುಗಳ (ದನಕರುಗಳ) ಮೇವಿಗೂ ಯಾವುದೇ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಕಾರ್ಯಪಾಲಕ ಅಭಿಯಂತ (ಇಇ) ಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತೆ ಸರಿತಾ, ಪರಿಸರ ಅಭಿಯಂತ ಶೇಖರ್ ರೆಡ್ಡಿ ಹಾಗೂ ಪುರಸಭೆಯ ಸಿಬ್ಬಂದಿ ಇದ್ದರು.
ಇಂಜಿನಿಯರ್ ನೇಮಕ ಶ್ರೀಘ್ರ : ಪೈಪ್ಲೈನ್ ಸಂಪರ್ಕವಿರುವ ವಾರ್ಡ್ಗಳಿಗೆ ಆಯಾ ಸಂಪುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪೈಪ್ಲೈನ್ ಇಲ್ಲದ ಕಡೆಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಪ್ರಸ್ತುತ ಎಲ್ಲ ವಾರ್ಡ್ಗಳಿಗೆ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಕೆಲವೆಡೆ ಇರುವ ನೀರಿನ ಸಮಸ್ಯೆಯನ್ನು ಶ್ರೀದಲ್ಲೇ ಬಗೆಹರಿಸಲಾಗುವುದು. ಪುರಸಭೆಯಲ್ಲಿ ಖಾಲಿಯಿರುವ ಇಂಜಿನಿಯರ್ ಹುದ್ದೆಯನ್ನು ಶ್ರೀವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.
ಕಲುಷಿತ ನೀರು ಸರಬರಾಜು : ಅಮಾನಿಕೆರೆ ಸಮೀಪವಿರುವ ಮೂರು ಕೊಳವೆ ಬಾವಿಗಳಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಮುಖ್ಯ ಓವರ್ ಹೆಡ್ ಟ್ಯಾಂಕ್ಗೆ ನೀರು ತುಂಬಿಸಿ ಅಲ್ಲಿಂದ ನಲ್ಲಿ ಮೂಲಕ ಸಾರ್ವಜನಿಕರಿಗೆ ಸರಬರಾಜು ಮಡಲಾಗುತ್ತಿತ್ತು. ಆದರೆ ಶುಕ್ರವಾರ ಮಣ್ಣು ಮಿಶ್ರಿತ ನೀರನ್ನು ಮನೆಮನೆ ಪೂರೈಸಲಾಗಿತ್ತು. ಟ್ಯಾಂಕ್ಅನ್ನು ಪರಿಶೀಲಿಸಿದಾಗ ಮಣ್ಣು ಮಿಶ್ರಿತ ನೀರು ಸಂಗ್ರಹಣೆಯಾಗಿರುವುದು ಬೆಳಕಿಗೆ ಬಂದಿತ್ತು. ಕೊಳವೆ ಬಾವಿಯಿಂದ ಟ್ಯಾಂಕ್ಗೆ ಸರಬರಾಜು ಆಗುವ ನೀರಿನ ಪೈಪ್ಲೈನ್ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಹಾನಿಗೊಂಡಕಾರಣ ಟ್ಯಾಂಕ್ನಲ್ಲಿ ಮಣ್ಣು ಮಿಶ್ರಿತ ನೀರು ಸಂಗ್ರಹಗೊಂಡಿದೆ ಎನ್ನಲಾಗಿದೆ. ಸದ್ಯ ಟ್ಯಾಂಕ್ಗಳಿಗೆ ಮೂಟೆಗಟ್ಟಲೆ ಬ್ಲಿಚಿಂಗ್ ಪುಡಿ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ.
ಶುದ್ಧ ಕುಡಿಯುವ ನೀರಿನ ಘಟಕಕ್ಕೂ ತಟ್ಟಿದ ಬಿಸಿ! : ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುವ ಸುಹಾಸ್ ಮಾತನಾಡಿ, ಮಣ್ಣು ಮಿಶ್ರಿತ ನೀರು ಬರುತ್ತಿರುವುದರಿಂದ ಒಂದು ಗಂಟೆಗೆ 5 ಸಾವಿರ ಲೀಟರ್ನಷ್ಟು ಶುದ್ಧವಾಗಬೇಕಿದ್ದ ನೀರು ಈಗ ಕೇವಲ 500 ಲೀಟರ್ ಶುದ್ಧವಾಗುತ್ತಿದೆ. ಇದರಿಂದ ಯಂತ್ರೋಪಕರಣಗಳೂ ಹಾನಿಗೊಳಗಾಗಿವೆ. ಈ ಬಗ್ಗೆ ದೂರು ನೀಡಿದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊಳವೆಬಾವಿಯಿಂದ ಟ್ಯಾಂಕ್ಗೆ ಸಂಪರ್ಕಿಸುವ ಪೈಪ್ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಹಾಳಾಗಿದ್ದು, ನೀರು ಕಲುಷಿತಗೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಟ್ಯಾಂಕ್ ಸ್ವಚ್ಛಗೊಳಿಸಲು ಸೂಚಿಸಲಾಗಿದ್ದು, ಸ್ವಚ್ಛತೆ ಕಾರ್ಯ ಮುಗಿದ ನಂತರವೇ ಸಾರ್ವಜನಿಕರಿಗೆ ಶುದ್ಧ ನೀರು ಸರಬರಾಜು ಮಾಡಲಾಗುವುದು.
— > ಭವ್ಯಾ ಮಹೇಶ್ ಅಧ್ಯೆ, ಪುರಸಭೆ ವಿಜಯಪುರ