ಗುರುಮಠಕಲ್ ತಾಲೂಕಿನ ಬೂದೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶಂಕುಸ್ಥಾಪನೆ ನೆರವೇರಿಸಿದರು. ಗ್ರೇಡ್-2 ತಹಸೀಲ್ದಾರ್ ನರಸಿಂಹ ಸ್ವಾಮಿ, ತಾಪಂ ಅಧಿಕಾರಿ ರಾಮಚಂದ್ರ ಬಸೂದೆ, ಶುಭಾಶಚಂದ್ರ ಕಟಕಟಿ, ಪ್ರಕಾಶ ನೀರೆಟಿ ಇತರರಿದ್ದರು.
- ಶಾಸಕ ಶರಣಗೌಡ ಕಂದಕೂರ ಸೂಚನೆ
- ಬೂದೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಗುರುಮಠಕಲ್: ಕ್ಷೇತ್ರದ ಜನರ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಬೂದೂರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಯಾದಗಿರಿ 2025-26ನೇ ಸಾಲಿನ ಸಿಎಂಐಡಿಪಿ ಯೋಜನೆಯಡಿ ಮಂಜೂರಾದ ವಿವಿಧ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಸೇರಿ ಯಾವುದೇ ಸಮಸ್ಯೆ ಇದ್ದರೆ ಅದಕ್ಕೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಅಲ್ಲದೆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಬಹಳ ಅಗತ್ಯವಿದೆ. ಹೀಗಾಗಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಕಾಕಲವಾರ ಗ್ರಾಮದ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎರಡು ದಿನದಲ್ಲಿ ಕಲ್ಪಿಸಿ, ಅದರ ಫೋಟೊ ಕಳುಹಿಸಬೇಕು. ಬೂದುರು ಗ್ರಾಮದ ಕಾಮಗಾರಿ ಗುಣಮಟ್ಟದಿಂದ ನಿರ್ವಹಣೆ ಮಾಡಿ ತುರ್ತಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕೆಲಸಕ್ಕೆ ಸ್ಥಳಿಯರು ಸಹ ಸಹಕಾರ ನೀಡಬೇಕು ಎಂದರು.
ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ, ಆರ್ಐ, ವಿಎ ಕೇಂದ್ರ ಸ್ಥಾನದಲ್ಲಿದ್ದು, ಮಳೆ ಹಾನಿ ಇತರೆ ಸಮಸ್ಯೆಗಳ ಕುರಿತು ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ಅರಕೇರಾ(ಬಿ)ಗ್ರಾಮದ ಕೊರಮ ಅಲೆಮಾರಿ ಸಮುದಾಯ ಭವನ ನಿರ್ಮಾಣ 20 ಲಕ್ಷ, ವೆಂಕಟೇಶ ನಗರ ತಾಂಡಾದ ದಾಮಾಸಾಬ್ ದೇವಸ್ಥಾನ ಶಿಖರ ನಿರ್ಮಾಣಕ್ಕಾಗಿ 10 ಲಕ್ಷ, ಬಂದಳ್ಳಿ ಗ್ರಾಮದ ಗುಂಬಲಮ್ಮ ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ, ಬುದೂರು ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಒಳ ಚರಂಡಿಗಳ ನಿರ್ಮಾಣಕ್ಕೆ 10 ಲಕ್ಷ, ಕಾಕಲವಾರ ಗ್ರಾಮದ ಹನುಮಾನ ದೇವಸ್ಥಾನದ ಅಭಿವೃದ್ದಿ 10 ಲಕ್ಷ, ಗುರುಮಠಕಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದುರಸ್ತಿ ಮತ್ತು ಸುಣ್ಣ ಬಣ್ಣ 30 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಶಚಂದ್ರ ಕಟಕಟಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನೀರೆಟಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಜೆಇ ಶಂಕರ್ ಗೌಡ, ಪ್ರಾಚಾರ್ಯ ಪ್ರೊ.ಪುರುಷೋತ್ತಮ ಜೋಶಿ, ಅಧಿಕಾರಿ ಬನ್ನಪ್ಪ, ಗ್ರೇಡ್&2 ತಹಸೀಲ್ದಾರ್ ನರಸಿಂಹ ಸ್ವಾಮಿ, ತಾಪಂ ಅಧಿಕಾರಿ ರಾಮಚಂದ್ರ ಬಸೂದೆ, ವಿಶ್ವನಾಥ್ ರೆಡ್ಡಿ ದೇಶಮುಖ್, ಬಸ್ಸಣ್ಣ ದೇವರಹಳ್ಳಿ, ಅಶೋಕ ಕಲಾಲ್, ನವಾಜರೆಡ್ಡಿ ಪಾಟೀಲ್, ರವಿಂದ್ರರೆಡ್ಡಿ ಗವಿನೋಳ, ಸುರೆಶ ಚಿನ್ನರಾಠೋಡ, ಹಣಮಂತ, ಸಿದ್ರಾಮರೆಡ್ಡಿ ಎಂ.ಟಿ.ಪಲ್ಲಿ, ಭಾನುಪ್ರಕಾಶ ಮೇದ, ಬಸರೆಡ್ಡಿ ಸೇರಿ ಅನೇಕರು ಇದ್ದರು.