ಯಾದಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕರ ದೂರ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆಯನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಉದ್ಘಾಟಿಸಿದರು. ಡಿಸಿ ರಾಹುಲ್ ತುಕಾರಾಮ ಪಾಂಡ್ವೆ, ಜಿಪಂ ಸಿಇಒ ಲವೀಶ್ ಓರ್ಡಿಯಾ, ಕಿರಣ ಪಿ.ಎಂ.ಪಾಟೀಲ್, ಪೃಥ್ವಿಕ್ ಶಂಕರ್, ಸಿದ್ದರಾಜು, ಮರಿಯಪ್ಪ ಇತರರಿದ್ದರು.
- ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಸಲಹೆ
- ಯಾದಗಿರಿಯಲ್ಲಿ ಸಾರ್ವಜನಿಕ ದೂರು ವಿಚಾರಣೆ
ಯಾದಗಿರಿ: ಪ್ರತಿಯೊಬ್ಬರೂ ಗೌರವಯುತ ಮತ್ತು ಆರೋಗ್ಯಕರ ರೀತಿಯಲ್ಲಿ ಬದುಕಲು ಸಂವಿಧಾನದಲ್ಲಿ ಅನುಕೂಲ ಮಾಡಿಕೊಟ್ಟಿದ್ದು, ಜಿಲ್ಲೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವ ಮೂಲಕ ಉತ್ತಮ ಆಡಳಿತ ನೀಡಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.
ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ದೂರು ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾನಾ ಯೋಜನೆಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಆಡಳಿತ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸರ್ಕಾರಿ ಕೆಲಸವನ್ನು ಕೇವಲ ಸಂಬಳಕ್ಕಾಗಿ ಮಾಡದೆ ಇದು ನಮ್ಮೂರು ಎಂಬ ಮನೋಭಾವದಿಂದ ಮಾಡಿದ್ದಲ್ಲಿ ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಯಾವುದೇ ಮತ್ತು ಯಾರದ್ದೇ ಒತ್ತಡಕ್ಕೆ ಒಳಗಾಗದೆ ಸ್ವತಂತ್ರವಾಗಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾನೂನು ಪ್ರಕಾರ ಎಲ್ಲರೂ ಕೆಲಸ ಮಾಡಬೇಕು. ಜಾತಿಯ ವ್ಯಾಮೋಹ ಬಿಡಬೇಕು. ಹೆಣ್ಣು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಹಿರಿಯರಿಗೆ ಸಮಯಕ್ಕೆ ಸರಿಯಾಗಿ ಮಾಸಾಶನ ನೀಡಬೇಕು. ಭಾರತ ಸಂವಿಧಾನಕ್ಕೆ ನಾವು ಎಲ್ಲರೂ ಬದ್ಧತೆ ತೋರಿಸಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು. ಕಂದಾಯ ಇಲಾಖೆಯಲ್ಲಿ ರೈತರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಬೇಕು ಎಂದು ನ್ಯಾಯಮೂರ್ತಿ ಫಣೀಂದ್ರ ಹೇಳಿದರು.
ಭ್ರಷ್ಟಾಚಾರ ನಿಮೂರ್ಲನೆ ಮಾಡಿದಲ್ಲಿ ದೇಶ, ರಾಜ್ಯ ಸಾಕಷ್ಟು ಅಭಿವೃದ್ಧಿ ಕಾಣಲಿದೆ. ಸಂವಿಧಾನದ ಆಶೋತ್ತರಗಳನ್ನು ನಾವೆಲ್ಲರೂ ಪಾಲಿಸಬೇಕು. ಹೆಚ್ಚಿನ ಸಂಖ್ಯೆಯ ದೂರುಗಳು ಬಂದಿದ್ದು, ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಭಾರತದ ಸಂವಿಧಾನ ಎಲ್ಲರಿಗೂ ಸಮಪಾಲು, ಸಮಬಾಳು ನೀಡಿದೆ ಎಂದ ಅವರು, ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರನ್ನು ಸರದಿಯಂತೆ ಕರೆಸಿ ದೂರುದಾರು ಮತ್ತು ಎದರುದಾರರ ಪ್ರಕರಣಗಳ ವಿಚಾರಣೆ ನಡೆಸಿದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರ್ಡಿಯಾ, ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಲೋಕಾಯುಕ್ತ ಎಸ್ಪಿ ಸಿದ್ದರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಇತರರಿದ್ದರು.
ಹಣ ವಸೂಲಿ ಮಾಡುವವರಿಂದ ಎಚ್ಚರವಿರಲಿ
ಲೋಕಾಯುಕ್ತರ ಕಚೇರಿಗೆ ಬಡವರು, ದೀನ ದಲಿತರು, ಸಿದ್ಧಾಂತ ಪಾಲಿಸುವವರ ಪ್ರಕರಣಗಳು ಬರುತ್ತವೆ. ಉದ್ದೇಶಪೂರ್ವಕವಾಗಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡುವ ಕೆಲವರಿದ್ದಾರೆ. ಇಂತಹವರಿಂದ ಅಧಿಕಾರಿಗಳು ಎಚ್ಚರ ವಹಿಸಬೇಕು. ಲೋಕಾಯುಕ್ತ ಕಾಯ್ದೆ ಜತೆ ಸಾರ್ವಜನಿಕರು ಮತ್ತು ಅಧಿಕಾರಿಗಳು ನಮ್ಮ ಇಲಾಖೆ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕ ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವ ಪ್ರಕರಣಗಳನ್ನು ಮಾತ್ರ ವಿಚಾರಣೆ ಮಾಡಲಾಗುತ್ತದೆ. ಜಿಲ್ಲಾಡಳಿತ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸೇವೆ ನೀಡಬೇಕೆಂದು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಸಲಹೆ ನೀಡಿದರು