ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಲಿತ ಮುಖಂಡರು ಭಾಗವಹಿಸಿದ್ದರು. ನಿಂಗರಾಜ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜು, ಗಜೇಂದ್ರ, ವಸಂತ, ಶೋಭಮ್ಮ, ಸ್ವಾಮಿ ಇತರರಿದ್ದಾರೆ. 
ರಾಜ್ಯ

ದಲಿತ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

ವಸಂತಕುಮಾರ್ ಬಿ
ಹುಣಸೂರು : ತಾಲೂಕಿನಲ್ಲಿ ದಲಿತ ಸಮುದಾಯದ ಭೂಮಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಲು ತಾಲೂಕು ಆಡಳಿತ ನಿರ್ಲಕ್ಷೃ ತೋರುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ ಮಲ್ಲಾಡಿ ಆರೋಪಿಸಿದರು.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದಲಿತರ ಸಭೆಯಲ್ಲಿ ಮಾತನಾಡಿ, ಎರಡು ವರ್ಷಗಳಿಂದಲೂ ತಾಲೂಕಿನ ದಲಿತರ ಭೂಮಿ, ಸ್ಮಶಾನ, ನಿವೇಶನ, ಜಮೀನಿಗೆ ತಿರುಗಾಡುವ ರಸ್ತೆಗಳ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದದಾರೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಈ ಸಂಬಂಧ ಹಲವು ಸಭೆಗಳಲ್ಲಿ ದಸಂಸದಿಂದ ಮನವಿ ಸಲಿಸುತ್ತಿದ್ದರೂ ನಿರ್ಲಕ್ಷೃ ವಹಿಸಿದ್ದಾರೆ. ಅಸಹಾಯಕ ದಲಿತರ ಭೂ ಸಮಸ್ಯೆಗಳಿಂದ ದಲಿತರು ಮತ್ತು ಇತರೆ ಸಮುದಾಯಗಳ ನಡುವೆ ಸಂಘರ್ಷವಾಗುವ ಅಪಾಯವಿದ್ದರೂ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ ಎಂದು ಬೇಸರ ತೋಡಿಕೊಂಡರು.
ಅನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ದಲಿತರು ಜಮೀನು, ಬೀದಿ ಬದಿಗಳಲ್ಲಿ ಶವವನ್ನು ಹೂಳುವ ಪರಿಸ್ಥಿತಿ ಇದೆ. ಇಂತಹ ಗ್ರಾಮಗಳಿಗೆ ಸ್ಮಶಾನವನ್ನು ಮಂಜೂರಾತಿ ಮಾಡಲಾಗಿಲ್ಲ. ಅಲೆಮಾರಿ ಸಮುದಾಯಗಳು ಗುಡಿಸಲುಗಳನ್ನು ಹಾಕಿಕೊಂಡು ಹಾವು, ಹಲ್ಲಿ ಹರಿದಾಡುವ ಸ್ಥಳಗಳಲ್ಲಿ ವಾಸ ಮಾಡುವ ಸ್ಥಿತಿ ಇದ್ದರೂ ಇಂತಹ ನಿರ್ಗತಿಕ ಕುಟುಂಬಗಳಿಗೆ ನಿವೇಶನಗಳ ಉದ್ದೇಶಕ್ಕಾಗಿ ಸರ್ಕಾರಿ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡದರೂ ಸ್ಪಂದನೆ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ತಾಲೂಕು ಸಂಚಾಲಕ ಬಲ್ಲೇನಹಳ್ಳಿ ಕೆಂಪರಾಜು ಮಾತನಾಡಿ, ಹುಣಸೂರು ನಗರದಲ್ಲಿ ಹಲವು ವರ್ಷಗಳಿಂದ ನಿವೇಶನಗಳನ್ನು ಹಂಚದೆ ಎಲ್ಲ ಸಮುದಾಯದ ಬಡ ಕುಟುಂಬಗಳು ಒಂದೊಂದು ಮನೆಯಲ್ಲಿ 3-4 ಜನರು ಇಕ್ಕಟ್ಟಿನಲ್ಲಿ ವಾಸ ಮಾಡುವಂತಾಗಿದೆ. ಇಂತಹ ಕುಟುಂಬಗಳಿಗೆ 2004ರಲ್ಲಿ 800 ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಇವುಗಳನ್ನು ಪರಿಶೀಲಿಸಿ ನಿಜವಾದ ಬಡ ಕುಟುಂಬಗಳಿಗೆ ಹಂಚಿಕೆ ಮಾಡಿಲ್ಲ. ಇಂತಹ ಹತ್ತಾರು ಸಮಸ್ಯೆಗಳಿಂದ ತಾಲೂಕಿನ ದಲಿತರು, ಅಲೆಮಾರಿ ಸಮುದಾಯಗಳು ಪರಿತಪಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷೃ ಧೋರಣೆ ಮುಂದುವರಿಸಿದ್ದಾರೆ. ಅಧಿಕಾರಿಗಳ ಈ ದಲಿತ ವಿರೋಧಿ ಧೋರಣೆ ಖಂಡಿಸಿ ಈ ತಿಂಗಳ ಅಂತ್ಯದೊಳಗೆ ದಲಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ಮುಖಂಡರಾದ ಕಿರಿಜಾಜಿ ಗಜೇಂದ್ರ, ಅಬ್ದುಲ್ ಮಲೀಕ್ ಯಶೋಧರಪುರ, ಲತೇಶ್ ಯಶೋಧರಪುರ, ಸ್ವಾಮಿ ಬಲ್ಲೇನಹಳ್ಳಿ, ಅಂಬೇಡ್ಕರ್ ನಗರದ ಆದಿವಾಸಿ ಮಹಿಳೆ ವಸಂತ, ಕಣ್ಣಯ್ಯ, ದಾಸಪ್ಪ, ಶೋಭಮ್ಮ, ಸಣ್ಣೇನಹಳ್ಳಿ ಗಣೇಶ, ದೊಡ್ಡಹೆಜ್ಜೂರು ಸ್ವಾಮಿ ಇತರರು ಇದ್ದರು.