ಕೆಂಭಾವಿ ಪಟ್ಟಣದ ನಾರಾಯಣಪುರ ಎಡದಂಡೆ ಕಾಲುವೆ ಪಕ್ಕದ ರಸ್ತೆಗಳಲ್ಲಿ ಅನಧೀಕೃತವಾಗಿ ತಲೆ ಎತ್ತಿರುವ ಹಣ್ಣಿನ ಅಂಗಡಿ ಮತ್ತು ಮಾಂಸದ ಅಂಗಡಿ. 
ರಾಜ್ಯ

ಅತಿಕ್ರಮಣ ತಡೆಗೆ ಅಧಿಕಾರಿಗಳ ರ್ನಿಲಕ್ಷ್ಯ

ಪ್ರಮುಖ ಮುಖ್ಯಾಂಶಗಳು

  • ಕಾಲುವೆ ಪಕ್ಕದ ರಸ್ತೆಯಲ್ಲಿ ಅನಧಿಕೃತ ಅಂಗಡಿಗಳು
  • ಪರವಾನಗಿ ಇಲ್ಲದ ಡಬ್ಬಾಗಳು ತೆರವು ಶೀಘ್ರ
ಕೆಂಭಾವಿ: ಪಟ್ಟಣದ ಹಲವು ಕಡೆ ಸರ್ಕಾರಿ ಜಾಗ ಅತಿಕ್ರಮಣ ಮಾಡುವುದು ರಾಜಾರೋಷವಾಗಿ ನಡೆದಿದ್ದು, ಇದನ್ನು ತಡೆಯಲು ಆಯಾ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈಗಾಗಲೆ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಒಳಪಟ್ಟಿರುವ ವಸಾಹತು ಪ್ರದೇಶಗಳಲ್ಲಿ ಖಾಸಗಿಯರು ಅತಿಕ್ರಮಣ ಮಾಡಿ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಇದು ಇಷ್ಟಕ್ಕೆ ನಿಲ್ಲದೆ ಕಾಲುವೆಯ ಪಕ್ಕದಲ್ಲಿರುವ ಇಲಾಖೆಯ ಜಾಗದಲ್ಲಿ ಅನಧಿಕೃತ ಅಂಗಡಿಗಳನ್ನು ಹಾಕುವ ಮೂಲಕ ಅತಿಕ್ರಮಣಕ್ಕೆ ನಾಂದಿ ಹಾಡಲಾಗುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಹಲವು ತಿಂಗಳಿನಿಂದ ಸುರಪುರ&ಹುನಗುಂದ ಮುಖ್ಯ ರಸ್ತೆಯ ಎಸ್​ಬಿಐ ವೃತ್ತದ ಕಾಲುವೆ ಸೇತುವೆ ಬಳಿ ಹಣ್ಣಿನ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳು ಜಾಗ ಅತಿಕ್ರಮಣ ಮಾಡಿದ್ದು ಇದರಿಂದ ಈ ಮುಖ್ಯ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸದೆ ಜನದಟ್ಟನೆಯಾಗುತ್ತಿದೆ. ನಾರಾಯಣಪುರ ಮುಖ್ಯ ಕಾಲುವೆಯ ಪಕ್ಕದ ರಸ್ತೆಯಲ್ಲಿ ಇದೀಗ ಹೊಸದಾಗಿ ಮಾಂಸದಂಗಡಿ ಕೂಡ ತಲೆ ಎತ್ತಿದ್ದು ನಿತ್ಯ ತಮ್ಮ ಹೊಲಗದ್ದೆಗಳಿಗೆ ತಿರುಗಾಡುವ ರೈತರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಮಾತು ಅನ್ನದಾತರಿಂದ ಕೇಳಿ ಬರುತ್ತಿವೆ.
ಇಲಾಖೆಯ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಂಗಡಿಗಳಿಗೆ ಮತ್ತು ಬೀದಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಿದ್ದು ಯಾರು ಎಂಬ ಪ್ರಶ್ನೆ ಉಲ್ಬಣವಾಗಿದ್ದು, ಪುರಸಭೆ ಈ ಬಗ್ಗೆ ಯಾವುದೇ ಪರವಾನಿಗೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ನಿತ್ಯ ಈ ರಸ್ತೆ ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆ ಆಗುತ್ತಿದೆ. ಇದೇ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು ಜನ ಜೀವ ಭಯದಿಂದ ಓಡಾಡುವ ಪರಿಸ್ಥಿತಿ ಬಂದಿದ್ದರೂ ಪೊಲೀಸ್​ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೆ ಮೌನ ವಹಿಸಿದೆ.
ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕೃಷ್ಣಾ ಭಾಗ್ಯ ನಿಗಮದ ಆಸ್ತಿ ಕೃಷ್ಣಾರ್ಪಣವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಕೂಡಲೇ ಈ ಬಗ್ಗೆ ಎಚ್ಚೆತ್ತು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕೆಂದು ನಾಗರಿಕರ ಒತ್ತಾಯವಾಗಿದೆ.
"

ಕಾಲುವೆಯ ಪಕ್ಕದ ಜಾಗ ನಮ್ಮ ಇಲಾಖೆಗೆ ಸಂಬಂಧಿಸಿದ್ದಾಗಿದ್ದು ಪರವಾನಿಗೆ ಇಲ್ಲದೆ ಯಾವುದೇ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಇನ್ನೆಡು ದಿನಗಳಲ್ಲಿ ಸ್ಥಳಕ್ಕೆ ಭೆಟಿ ನೀಡಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗುವುದು.

— > ಶರಣು ಬಳುರಗಿ ಎಇ ಕೆಬಿಜೆಎನ್​ಎಲ್​


"

ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವುದು ಪುರಸಭೆ ಜವಾಬ್ದಾರಿಯಾಗಿದೆ. ಈ ಬಗ್ಗೆ ನಾಳೆಯೇ ಕಾರ್ಯಾಚರಣೆ ನಡೆಸಿ ರಸ್ತೆ ಪಕ್ಕ ಇರುವ ಅಂಗಡಿಗಳನ್ನು ತೆರವುಗೊಳಿಸಲಾಗುವುದು.

— > ಪ್ರಕಾಶ ಬಾಕಲಿ ಪುರಸಭೆ ಮುಖ್ಯಾಧಿಕಾರಿ ಕೆಂಭಾವಿ