Officials' focus on helping investors
ಹುಳಿಯಾರು: ಇಲ್ಲಿನ ದೇವರಾಜ ಅರಸು ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಪಿಗ್ಮಿ ಹಣ ವಂಚನೆಯಾಗಿ ವಾರ ಕಳೆದಿದ್ದರೂ ಹೂಡಿಕೆದಾರರ ನೆರವಿಗೆ ಯಾವೊಬ್ಬ ಅಧಿಕಾರಿ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಗ್ರಾಹಕರ ವೇದಿಕೆಯ ರಾಜ್ಯ ಕಾರ್ಯದರ್ಶಿ ಕಾರ್ಗಿಲ್ ಸತೀಶ್, ಘಟನೆ ನಡೆದು ಒಂದು ವಾರ ಉರುಳಿದೆ. ಸಂಘದ ಪಿಗ್ನಿ ಸಂಗ್ರಾಹಕ ದಿವಾಕರ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಕಚೇರಿಗೆ ಬೀಗ ಹಾಕಲಾಗಿದೆ. ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ನೂರಾರು ಬಡ ಗ್ರಾಹಕರು ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಈ ವಂಚನೆ ಸುದ್ದಿಯಾದರೂ ಸಹಕಾರ ಇಲಾಖೆಯ ಉಪ ನಿಬಂಧಕರು ಅಥವಾ ಸಹಾಯಕ ನಿಬಂಧಕರು ಸ್ಥಳಕ್ಕೆ ಭೇಟಿ ನೀಡಿ ಗ್ರಾಹಕರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ. ಡಿಸಿಸಿ ಬ್ಯಾಂಕ್ ಮತ್ತು ಎಆರ್ ಆಫೀಸ್ ಅನುಮತಿ ಮೇರೆಗೆ ನಡೆಯುವ ಇಂತಹ ಸಂಘಗಳ ಮೇಲೆ ಅಧಿಕಾರಿಗಳ ನಿಯಂತ್ರಣ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದರೂ ತನಿಖೆಯ ವೇಗ ಕುಂಠಿತವಾಗಿದೆ. ಬಡ ಗ್ರಾಹಕರು ಕಷ್ಟಪಟ್ಟು ಉಳಿಸಿದ ಹಣಕ್ಕೆ ನ್ಯಾಯ ಸಿಗಬೇಕು. ಅಧಿಕಾರಿ ವರ್ಗವು ತಕ್ಷಣ ಎಚ್ಚೆತ್ತುಕೊಂಡು, ತನಿಖೆ ಆರಂಭಿಸಿ ಹೂಡಿಕೆದಾರರ ಹಣವನ್ನು ಮರಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.