ಚಿಕ್ಕಬಳ್ಳಾಪುರ: ಮೊದಲೇ ವಿದ್ಯುತ್, ನೀರಿನ ಅಭಾವದ ಸಮಸ್ಯೆ, ಇಂತಹ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆ ಕೈಗೊಳ್ಳುತ್ತಿರುವ ರೈತರಿಗೆ ಕೊಳವೆ ಬಾವಿ ಕೇಬಲ್ ವೈರ್ ಕಳ್ಳರ ಹಾವಳಿ ತಲೆ ನೋವಾಗಿದ್ದು ಹೀಗೆ ವ್ಯಾಪಕ ದೂರಿನ ನಡುವೆ ಪೊಲೀಸರು ಇಬ್ಬರು ಕೇಬಲ್ ಕಳ್ಳರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಸೋಲಮಾಕಲಹಳ್ಳಿಯ ನವೀನ್ ಕುಮಾರ್ ಹಾಗೂ ಅಶೋಕ್ ಆರೋಪಿಗಳು. ಬಂಧಿತರಿಂದ 30 ಸಾವಿರ ರೂ ಮೌಲ್ಯದ ಕೇಬಲ್ ವೈರ್ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಗಾರೆ ಕೆಲಸಗಾರರು.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿನ ಹಾಲಿನ ಡೈರಿ ವಾಸವಾಗಿದ್ದರು.
*ಕೃಷಿ ಜಮೀನಿನಲ್ಲಿ ಕಳವು*
ಚಿಕ್ಕಬಳ್ಳಾಪುರ ತಾಲೂಕಿನ ಪಾತೂರು ಗ್ರಾಮದ ಗೋಪಿ ಎಂಬುವರಿಗೆ ಸೇರಿದ ಜಮೀನಿನಲ್ಲಿನ ಕೊಳವೆ ಬಾವಿಗೆ ಅಳವಡಿಸಿದ್ದ 120 ಮೀಟರ್ ಉದ್ದದ ಕೇಬಲ್ ವೈರ್ ಕಳವಾಗಿತ್ತು. ಇದರ ನಡುವೆ ಮತ್ತೊಂದು ಕಡೆ ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದಾಗ ಸ್ಥಳೀಯರು ಈ ಇಬ್ಬರನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.