ಆರೋಗ್ಯ ಇಲಾಖೆ  
ರಾಜ್ಯ

ಸರ್ಕಾರಿ ವೈದ್ಯರ ಖಾಸಗಿ ಸೇವೆಗೆ ನಿರ್ಬಂಧಕ್ಕೆ ಆಕ್ಷೇಪ

ಪ್ರಮುಖ ಮುಖ್ಯಾಂಶಗಳು

  • * ವೈದ್ಯರ ಖಾಸಗಿ ಸೇವೆ ನಿರ್ಬಂಧದಿಂದ ರೋಗಿಗಳಿಗೆ ತೊಂದರೆ
  • * ಏಕಪಕ್ಷೀಯ ಆದೇಶಗಳಿಂದ ತೊಂದರೆ
ಬೆಂಗಳೂರು: ಸರ್ಕಾರಿ ವೈದ್ಯರು ಕರ್ತವ್ಯದ ಬಳಿಕ ಖಾಸಗಿ ವ್ಯವಸ್ಥೆಯಡಿ ನೀಡುತ್ತಿದ್ದ ಒಳರೋಗಿಗಳ ಚಿಕಿತ್ಸೆಗೆ ಸರ್ಕಾರ ನಿರ್ಬಂಧ ವಿಧಿಸಿರುವುದಕ್ಕೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಈ ಹೊಸ ಕ್ರಮದಿಂದಾಗಿ ಗ್ರಾಮೀಣ ಭಾಗದ ರೋಗಿಗಳ ಆರೋಗ್ಯ ಸೇವೆಯ ಮೇಲೆ ದುಷ್ಪರಿಣಾಮ ಉಂಟಾಗುವುದರ ಜತೆಗೆ ನುರಿತ ಶಸ್ತ್ರಚಿಕಿತ್ಸಕರ ಸೇವೆಯಿಂದ ಜನರು ವಂಚಿತರಾಗುತ್ತಾರೆ. ಈಗ ಒಳರೋಗಿ ಮತ್ತು ಹೊರರೋಗಿ ಸೇವೆಯೆಂದು ವರ್ಗೀಕರಿಸಿ, ಸರ್ಕಾರಿ ವೈದ್ಯರು ಖಾಸಗಿ ವ್ಯವಸ್ಥೆಯಡಿ ಒಳರೋಗಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಬಾರದೆಂದು ಆದೇಶ ಹೊರಡಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದೆ.
ಸರ್ಕಾರಿ ಆಸ್ಪತ್ರೆಯ ಕರ್ತವ್ಯದ ಅವಧಿಯಲ್ಲಿ ಖಾಸಗಿ ಸೇವೆ ನೀಡುವಂತಹ ವೈದ್ಯರಿಗೆ ಸಂಘ ಯಾವುದೇ ಬೆಂಬಲ ವ್ಯಕ್ತಪಡಿಸುವುದಿಲ್ಲ. ಸರ್ಕಾರಿ ವೈದ್ಯರನ್ನು ಗುರಿಯಾಗಿಸಿಕೊಂಡು ಏಕಪಕ್ಷೀಯವಾಗಿ ಆದೇಶಗಳನ್ನು ಹೊರಡಿಸುವುದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ವೈದ್ಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇತ್ತೀಚೆಗೆ ಸರ್ಕಾರಿ ವೈದ್ಯರನ್ನೇ ಗುರಿಯಾಗಿಸಿಕೊಂಡು ಸರ್ಕಾರವು ಮನಸೋ ಇಚ್ಛೆ ಆದೇಶಗಳನ್ನು ಹೊರಡಿಸುತ್ತಿರುವ ಪರಿಣಾಮ, ವೈದ್ಯರ ಆತ್ಮಸ್ಥೈರ್ಯ ಕುಗ್ಗುವ ಜತೆಗೆ ಸರ್ಕಾರಿ ಕರ್ತವ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಬೇಸರ ವ್ಯಕ್ತಪಡಿಸಿದ್ದಾರೆ.