ಒಂದೆಡೆ ಆಹಾರ ಸಿಗದೆ ಹಸಿವಿನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ನಿಯಮಿತವಲ್ಲದೆ ಬೇಕಾಬಿಟ್ಟಿಯಾಗಿ ಆಹಾರ ಸೇವಿಸುತ್ತಿರುವ ಕಾರಣ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸ್ಥೂಲಕಾಯದಂತಹ ಗಂಭೀರ ಸಮಸ್ಯೆ ಹೆಚ್ಚುತ್ತಿವೆ. ತಜ್ಞರ ಪ್ರಕಾರ, 2040ರ ವೇಳೆಗೆ ಭಾರತದಲ್ಲಿ ಶೇ.40 ಮಂದಿ ಬೊಜ್ಜಿನ ಸಮಸ್ಯೆಗೆ ತುತ್ತಾಗಲಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಭಾಗದ ಜನರೂ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಬೊಜ್ಜಿನಂತಹ ಜೀವನಶೈಲಿ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಹಿಡನ್ ಹಂಗರ್ (ಗುಪ್ತ ಹಸಿವು) ಅಂದರೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಕೊರತೆ. ಇಂದಿನ ಸ್ಥಿತಿಯನ್ನು ವಿಶ್ಲೇಷಿಸುವುದಾದರೆ, ನಮ್ಮಲ್ಲಿ ಆಹಾರ ಧಾನ್ಯಗಳ ಕೊರತೆಯಿಲ್ಲ, ಬದಲಿಗೆ ಸಮೃದ್ಧಿಯ ಸಮಸ್ಯೆ ಇದೆ. ಆಹಾರ ಉತ್ಪನ್ನಗಳ ಉತ್ಪಾದನೆ ಅಧಿಕವಾಗಿದ್ದರೂ, ಬೇಡಿಕೆಯಿರುವ ಸ್ಥಳಗಳಿಗೆ ಆಹಾರವನ್ನು ಸರಿಯಾಗಿ ತಲುಪಿಸುವುದು ಹಾಗೂ ಸೂಕ್ತವಾಗಿ ಸಂಸ್ಕರಿಸಿ ಮೌಲ್ಯವರ್ಧನೆಗೊಳಿಸುವಲ್ಲಿ ಹಿನ್ನಡೆಯಾಗಿದೆ.
‘ಫುಡ್ ಆಸ್ ಎ ವೆಪನ್’ ಆತಂಕ: ದೇಶದಲ್ಲಿ ಖಾದ್ಯತೈಲ, ಬೇಳೆಕಾಳುಗಳ ಕೊರತೆ ಇದ್ದು, ವಿದೇಶಗಳನ್ನು ನೆಚ್ಚಿಕೊಳ್ಳಬೇಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಕೊರತೆ ಎದುರಾದರೆ, ಇತರ ದೇಶಗಳು ಇವುಗಳನ್ನು ‘ಫುಡ್ ಆಸ್ ಎ ವೆಪನ್’ (ಆಯುಧವಾಗಿ ಆಹಾರ) ಆಗಿ ಬಳಸಿ ಭಯದ ವಾತಾವರಣ ಸೃಷ್ಟಿಸುವ ಸಾಧ್ಯತೆಯಿದೆ. ಹಾಗಾಗಿ, ಎಚ್ಚೆತ್ತುಕೊಂಡು ಈಗಿನಿಂದಲೇ ಆಹಾರ ಭದ್ರತೆಗೆ ಆದ್ಯತೆ ನೀಡಬೇಕಿದೆ.
ಹವಾಮಾನ ಬದಲಾವಣೆ ಕೃಷಿಗೆ ಹೊಡೆತ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೈಡ್ರಾಲಿಕ್ ಚಕ್ರಗಳಲ್ಲಿ ಬದಲಾವಣೆ, ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟ ಹೆಚ್ಚಳ, ಬರ, ಅತಿ ಉಷ್ಣತೆ ಹಾಗೂ ಮಳೆಗಾಲದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದು ನೇರವಾಗಿ ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಅಪೌಷ್ಟಿಕತೆ ಜತೆಗೆ ಕೀಟಗಳ ಹಾವಳಿ ಮತ್ತು ಬೆಳೆಗಳಿಗೆ ರೋಗಗಳು ಹೆಚ್ಚುತ್ತಿವೆ. ಬೆಳೆ ಬೆಳೆಯುವ ಅವಧಿಯೂ ಬದಲಾಗುತ್ತಿದ್ದು, ರಾಜ್ಯದಲ್ಲಿ ಕೃಷಿ ಕುಟುಂಬಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಜಾಗತಿಕ ಮಟ್ಟದಲ್ಲಿ ಹಸಿವಿನ ಬಿಕ್ಕಟ್ಟು ತೀವ್ರ ವಿಶ್ವದ ವಿವಿಧೆಡೆ, ವಿಶೇಷವಾಗಿ ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ಹಸಿವಿನ ಬಿಕ್ಕಟ್ಟು ತೀವ್ರರೂಪ ಪಡೆದುಕೊಂಡಿದೆ. ಗಾಜಾ, ಲಿಬನಾನ್, ಸುಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳಲ್ಲಿ 4.5 ಕೋಟಿಗೂ ಅಧಿಕ ಜನರು ತೀವ್ರ ಹಸಿವಿನಿಂದ ನರಳುತ್ತಿದ್ದಾರೆ. ಬಡತನ, ಯುದ್ಧ, ಪ್ರಾಕೃತಿಕ ವಿಕೋಪ ಮತ್ತು ಕೃಷಿರಂಗದ ಹಿನ್ನಡೆ ಇದಕ್ಕೆ ಕಾರಣವಾಗಿವೆ. ಭಾರತದಲ್ಲಿ ಅಗತ್ಯವಿರುವಷ್ಟು ಆಹಾರ ಉತ್ಪಾದನೆಯಾಗುತ್ತಿದ್ದರೂ ಅಪೌಷ್ಟಿಕತೆ ಮತ್ತು ಹಸಿವಿನಿಂದಾಗಿ ಅಲ್ಲಲ್ಲಿ ಸಾವುಗಳಾಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇವೆ.
ಅಗತ್ಯ ಇರುವವರಿಗೆ ಆಹಾರ ಕೈಗೆಟುಕುವಂತೆ ಮಾಡುವುದು
ಸಮುದಾಯ ಮಟ್ಟದಲ್ಲಿ ಅಪೌಷ್ಟಿಕತೆ ಗುರುತಿಸುವುದು
ಹವಾಮಾನ ಸ್ನೇಹಿ ಕೃಷಿಗೆ ಬದಲಾಗುವುದು
ವಿಪತ್ತು ಅಪಾಯ ತಗ್ಗಿಸುವುದು
ತಾಯಂದಿರ ಆರೋಗ್ಯದ ಮೇಲೆ ಗಮನ ಹರಿಸುವುದು
ನೈರ್ಮಲ್ಯ ವ್ಯವಸ್ಥೆಗಳ ಸುಧಾರಣೆ ಹಾಗೂ ಆಹಾರ ಸಂಗ್ರಹಣಾ ವ್ಯವಸ್ಥೆಗೆ ಆದ್ಯತೆ
ಸಮುದಾಯದ ಒಗ್ಗಟ್ಟು ಅಳವಡಿಕೆ
ಮುದಿನ ಪೀಳಿಗೆಗೆ ಆಹಾರ ವ್ಯವಸ್ಥೆಗಳ ಸುಧಾರಣೆ
ಕೃಷಿ ಕ್ಷೇತ್ರ ಯಾಂತ್ರಿಕರಣಗೊಳ್ಳಬೇಕು
ಹನಿ ನೀರಾವರಿಗೆ ಆದ್ಯತೆ
ಸಾವಯವ ಕೃಷಿ, ಹೈನುಗಾರಿಕೆಗೆ ಇನ್ನಷ್ಟು ಒತ್ತು
ಕೃಷಿ ತ್ಯಾಜ್ಯ ವಸ್ತುಗಳ ನಿರ್ವಹಣೆ, ಮರು ಬಳಕೆಗೆ ಪ್ರಾಮುಖ್ಯತೆ
ಆಹಾರ ಕೊರತೆಯ ದುಷ್ಪರಿಣಾಮ ವೈಭವೀಕರಿಸದೆ ಕಾರಣಗಳಿಗೆ ಪರಿಹಾರ ಹುಡುಕುವುದು
ಈ ಬಾರಿಯ ಎಲ್ನಿನೋ ಪ್ರಭಾವದಿಂದ ರಾಜ್ಯದ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೇವಲ ಶೇ.75 ಪ್ರದೇಶಗಳಲ್ಲಿ ಬಿತ್ತನೆಯಾಗಿದೆ. ಆದರೆ, ಬಿತ್ತನೆಯಾಗಿರುವ ಈ ಪ್ರದೇಶಗಳಲ್ಲಿ ಶೇ.90ಕ್ಕಿಂತ ಅಧಿಕ ವಿವಿಧ ಬೆಳೆಗಳು ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಶೇ.40-50 ಆಹಾರ ಉತ್ಪಾದನೆ ಕುಂಠಿತವಾಗುವ ಸಾಧ್ಯತೆ ಇದೆ.ಡಾ. ಶ್ರೀನಿವಾಸರೆಡ್ಡಿ ಹಿರಿಯ ಹವಾಮಾನ ತಜ್ಞ