ಕಲಬುರಗಿಯ ಗಾಜಿಪುರದ ಕೃಷಿಕಲ್ಪ ಕಚೇರಿಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಗುರುವಾರ ಸಿರಿಧಾನ್ಯ ಉತ್ಪನ್ನ ಬಿಡುಗಡೆ ಮಾಡಿದರು. ಡಿಐಸಿ ಜಂಟಿ ನಿರ್ದೇಶಕ ಅಬ್ದುಲ್​ ಅಜೀಂ, ಉದ್ಯಮಿಗಳಾದ ಪ್ರಶಾಂತ ಬೆಳ್ಳೆರಿಮಠ, ಮಹೇಶ್​ ಪಾಟೀಲ್​, ನಾಗರಾಜ ಮರಲಿಂಗಣ್ಣವರ್​ ಇತರರಿದ್ದರು. 
ರಾಜ್ಯ

ಸಿರಿಧಾನ್ಯ ಪೌಷ್ಟಿಕಾಂಶ ಉತ್ಪನ್ನ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಇಕ್ರಮ್​ ಶರೀಫ್​ ಹೇಳಿಕೆ
  • ಸಾಂಪ್ರದಾಯಿಕ ಆಹಾರ ಒದಗಿಸುವ ಉದ್ದೇಶ
ಕಲಬುರಗಿ: ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮೂವರು ಯುವ ಉದ್ಯಮಿಗಳು ಸೇರಿ ತಯಾರಿಸಿರುವ ಪ್ರೋವಿಫೈ ಸಂಸ್ಥೆ ಸಕ್ರಿಯಗೊಳಿಸಿದ ಸಿರಿಧಾನ್ಯಗಳು ಪೌಷ್ಟಿಕಾಂಶದ ಉತ್ಪನ್ನಗಳಾಗಿವೆ ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.
ಗಾಜಿಪುರದ ಕೃಷಿ ಕಲ್ಪ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೋವಿಫೈ ಫುಡ್ಸ್​ ಪ್ರೈ. ಲಿಮಿಟೆಡ್​ನಿಂದ ವೈಜ್ಞಾನಿಕವಾಗಿ ಸಂಸ್ಕರಿಸಿದ ನವಣೆ, ಊದಲು, ಸಾಮೆ, ಹಾರಕಾ ಹಾಗೂ ಕೊರಲೆ ಸಿರಿಧಾನ್ಯ ಬಿಡುಗಡೆ ಮಾಡಿದ ಅವರು, ಬದಲಾಗುತ್ತಿರುವ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಕುರಿತ ಅರಿವು ಕೊರತೆ ಹಿನ್ನೆಲೆಯಲ್ಲಿ ಪೌಷ್ಟಿಕಾಂಶಭರಿತ ಸಾಂಪ್ರದಾಯಿಕ ಆಹಾರ ಒದಗಿಸುವ ಉದ್ದೇಶ ಈ ಉತ್ಪನ್ನ ಹೊಂದಿದೆ. ಯುವ ಉದ್ಯಮಿಗಳ ಈ ಪಯಣ ಯಶಸ್ಸಿನಿಂದ ಕೂಡಲಿ ಎಂದು ಹಾರೈಸಿದರು.
ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಮುಂದಾಗಿರುವ ಯುವ ಉದ್ಯಮಿಗಳಾದ ಪ್ರಶಾಂತ ಬೆಳ್ಳೆರಿಮಠ, ಮಹೇಶ್​ ಪಾಟೀಲ್​ ಹಾಗೂ ನಾಗರಾಜ ಮರಲಿಂಗಣ್ಣವರ ಧೈರ್ಯ ಮೆಚ್ಚುವಂತದ್ದು ಎಂದರು.
ಕೃಷಿಕಲ್ಪ ಸಂಸ್ಥೆ ಸಿಇಒ ಸಿ.ಎಂ. ಪಾಟೀಲ್​ ಮಾತನಾಡಿ, 2017ರಿಂದ ರಾಜ್ಯ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿ ಪ್ರತಿವರ್ಷ 100 ನವೋದ್ಯಮಿಗಳಿಗೆ ಗರಿಷ್ಠ 50 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡುತ್ತಿದೆ. ಪ್ರಸ್ತುತ 25 ನವೋದ್ಯಮಿಗಳ ಪೈಕಿ 18 ಜನ ಕಲ್ಯಾಣ ಕರ್ನಾಟಕದವರ ಆಯ್ಕೆಯಾಗಿದ್ದಾರೆ. ಸ್ಟಾರ್ಟಪ್​ ಮಾಡುವವರಿಗೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣ ಕೌಶಲ, ಉತ್ನನ್ನಗಳ ತಯಾರಿಕೆ, ಸಂಸ್ಕರಣೆ ನಿಟ್ಟಿನಲ್ಲಿ ಕೃಷಿ ಕಲ್ಪ ಸಂಸ್ಥೆಗೆ ಎಲ್ಲ ರೀತಿಯಿಂದ ನೆರವು ನೀಡುತ್ತಿದೆ ಎಂದು ತಿಳಿಸಿದರು.
ಪೌಷ್ಟಿಕಾಂಶಭರಿತ ಸಾಂಪ್ರದಾಯಿಕ ಸಿರಿಧಾನ್ಯಗಳನ್ನು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗಿಸುವ ಗುರಿ ಹೊಂದಲಾಗಿದೆ. ಸಿರಿಧಾನ್ಯಗಳ ನೈಸರ್ಗಿಕ ಗುಣ ಕಾಪಾಡಲು ಬದ್ಧರಾಗಿದ್ದೇವೆ. ಈ ಉತ್ಪನ್ನ ಬಿಡುಗಡೆ ಕೇವಲ ಹೊಸ ಉತ್ಪನ್ನಗಳ ಪರಿಚಯವಲ್ಲ. ಇದು ಆರೋಗ್ಯಕರ ಆಹಾರ ಸಂಸತಿ ನಿರ್ಮಿಸುವುದು, ರೈತರಿಗೆ ಹೆಚ್ಚಿನ ಮೌಲ್ಯ ಸೃಷ್ಟಿಸುವುದು ಮತ್ತು ಸುಸ್ಥಿರ ಕೃಷಿಗೆ ಉತ್ತೇಜನ ನೀಡಲು ಪ್ರಯತ್ನ ಎಂದು ಹೇಳಿದರು.
ಕೃಷಿಕಲ್ಪ ಸಂಸ್ಥೆ ಉಪಾಧ್ಯಕ್ಷ ಈರಣ್ಣ ರೊಟ್ಟೆ, ಯುವ ಉದ್ಯಮ ಯೋಜನೆ ಹೆಡ್​ ಅಭಿನಂದನ್​ ಕವಳೆ, ಉದ್ಯಮಿ ದೊಡ್ಡಪ್ಪ ನಿಷ್ಠಿ, ಪ್ರೊಬೇಷನರ್​ ಐಎಎಸ್​ ಅಧಿಕಾರಿ ಶಿಖರ್​ ಮೋಘಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್​ ಅಜೀಮ್​ ಇತರರಿದ್ದರು.

ಶೀಘ್ರ ಜೀರ್ಣ

ಕೃಷಿಕಲ್ಪ ಸಂಸ್ಥೆಯ ಬೆಂಬಲ ಮತ್ತು ಮಾರ್ಗದರ್ಶನದಲ್ಲಿ ಸಾಂಪ್ರದಾಯಿಕ ಸಿರಿಧಾನ್ಯಗಳಿಂದ ಆಧುನಿಕ ಪೌಷ್ಟಿಕತೆಯತ್ತ ಕೊಂಡೊಯ್ಯುವುದು ಪ್ರೊವಿಫೈ ಉದ್ದೇಶ. ನಮ್ಮ ಈ ಸಿರಿಧಾನ್ಯಗಳು 7-8 ಗಂಟೆ ನೀರಿನಲ್ಲಿ ನೆನೆಸಿ ಯಾಂತ್ರಿಕವಾಗಿ ಒಣಗಿಸಿ ಹೈಜೀನ್​ ಪ್ಯಾಕ್​ ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮೆಟ್ರೋದಂತಹ ನಗರಗಳಲ್ಲಿ ತ್ವರಿತವಾಗಿ ಅಡುಗೆ ಮಾಡಲು ಸಹಾಯವಾಗಲಿದೆ. ವಿಶೇಷವಾಗಿ ಈ ಉತ್ಪನ್ನಗಳಿಂದ ಶೀಘ್ರ ಜೀರ್ಣ ಆಗಲಿದೆ ಎನ್ನುತ್ತಾರೆ ನವೋದ್ಯಮಿಗಳಾದ ಪ್ರಶಾಂತ ಬೆಳ್ಳೆರಿಮಠ, ಮಹೇಶ ಪಾಟೀಲ್​ ಹಾಗೂ ನಾಗರಾಜ ಮರಲಿಂಗಣ್ಣವರ.
"

ಕಲಾಣ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ, ಬಂಡವಾಳ ಹಾಕಲು ರಾಜ್ಯ ಸರ್ಕಾರ ಎಲಿವೇಟ್​ ಕರ್ನಾಟಕ ಮತ್ತು ಲೀಪ್​ ಯೋಜನೆ ಜಾರಿಗೊಳಿಸಿದೆ. ಬೆಂಗಳೂರಾಚೆ ಟೈರ್​-2, ಟೈರ್​-3 ಸಿಟಿಗಳಲ್ಲಿ ಸ್ಥಳಿಯ ಆರ್ಥಿಕ ಚಟುವಟಿಕೆಗೆ ವೇಗ ನೀಡುವುದು ಇದರ ಉದ್ದೇಶ. ಎಲಿವೇಟ್​ ಕರ್ನಾಟಕದಲ್ಲಿ ಸ್ಟಾರ್ಟಪ್​ನಡಿ ಸರ್ಕಾರ ಸಹಾಯಧನ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು.

— > ಇಕ್ರಮ್​ ಶರೀಫ್​ ಜಿಲ್ಲಾಧಿಕಾರಿ