Nutrition food  
ರಾಜ್ಯ

ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಪೌಷ್ಠಿಕ ಆಹಾರ

ಪ್ರಮುಖ ಮುಖ್ಯಾಂಶಗಳು

  • * ಆರೋಗ್ಯ ಇಲಾಖೆಯಿಂದ ಆದೇಶ
  • * ಸಿರಿಧಾನ್ಯ, ಹಣ್ಣು, ಸಲಾಡ್ ವಿತರಣೆಗೆ ಸುಚನೆ
  • * ಪ್ಲಾಸ್ಟಿಕ್ ಬಾಟಲ್ ನೀರು ನಿಷೇಧ
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಗುಣಮಟ್ಟ ಸುಧಾರಿಸಲು ಹಾಗೂ ಆರೋಗ್ಯಕರ ಆಹಾರ ಉತ್ತೇಜಿಸಲು ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಸೂಚಿಸಿರುವ ಆರೋಗ್ಯ ಇಲಾಖೆ, ಸಿರಿಧಾನ್ಯ ಆಧಾರಿತ ಲಘು ಉಪಾಹಾರ, ಹಣ್ಣು ತರಕಾರಿಗಳ ಸಲಾಡ್ ವಿತರಣೆಗೆ ಶಿಫಾರಸು ಮಾಡಿ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಕಚೇರಿ ಆವರಣದಲ್ಲಿರುವ ಎಲ್ಲ ಖಾನಾವಳಿ, ಹೋಟೆಲ್ ಹಾಗೂ ಕ್ಯಾಂಟೀನ್‌ಗಳಲ್ಲಿಯೂ ಪೌಷ್ಟಿಕ ಆಹಾರ ವಿತರಣೆ ಮಾಡುವಂತೆ ಸೂಚಿಸಲಾಗಿದೆ. ಮೈಕ್ರೋವೇವ್‌ನಲ್ಲಿ ತಯಾರಿಸಿರುವ, ಬಿಸಿ ಮಾಡಿರುವ, ಕೈಗಾರಿಕೆಗಳಿಂದ ಸಂಸ್ಕರಿಸಲ್ಪಟ್ಟ, ಅಧಿಕ ಕೊಬ್ಬು, ಎಣ್ಣೆ, ಮಸಾಲೆಯುಕ್ತ ಆಹಾರ, ಕರಿದ ತಿಂಡಿಗಳು, ಕಾರ್ಬೋನೆಟೆಡ್ ಪಾನೀಯ, ಅಧಿಕ ಸಕ್ಕರೆಯ ಹಣ್ಣಿನ ರಸ, ಅಲ್ಕೋಹಾಲ್ ಆಧರಿತ ಪಾನೀಯಗಳು, ಹಾಲು, ಕಾಫಿ, ಚಹಾ ಹಾಗೂ ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರು ನೀಡುವುದನ್ನು ನಿಷೇಧಿಸಲಾಗಿದೆ.
ಜನರ ಆರೋಗ್ಯದ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಇಲಾಖೆಗಳ ಮುಖ್ಯಸ್ಥರು ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ. ಅರೋಗ್ಯ ಸೌಧದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಇದು ಕಟ್ಟಾಯ ಜಾರಿಗೆ ತರಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ಆಹಾರವಿರಲಿ?
* ಸಿರಿಧಾನ್ಯವುಳ್ಳ ಲಘು ಉಪಾಹಾರ
* ಕಡಿಮೆ ಕೊಬ್ಬು, ಸಕ್ಕರೆ ಆಹಾರ
* ಹೆಚ್ಚು ನಾರುಳ್ಳ ಪದಾರ್ಥಗಳು
* ಹಣ್ಣು, ತರಕಾರಿ ಹಾಗೂ ಕಾಳುಗಳು
* ಬೇಯಿಸಿದ ಹುರಳಿಕಾಳು, ಬಟಾಣಿ
* ಮೆಕ್ಕೆಜೋಳ, ಉಪ್ಪು ರಹಿತ ಹುರಿದ ಧಾನ್ಯ
* ಬಾದಾಮ್, ಆಕ್ರೋಟ್, ನೆಲಗಡಲೆ,
*ಕುಂಬಳಕಾಯಿ, ಸೂರ್ಯಕಾಂತಿ ಬೀಜಗಳು
* ಸಕ್ಕರೆ ಕಡಿಮೆ ಇರುವ ಲಘು ಪಾನೀಯ
* ಚೆನ್ನಾಗಿ ಬೇಯಿಸಿದ ಬಿಳಿ ಮಾಂಸ
*ಬಿಳಿ ಅಕ್ಕಿಯ ಬದಲು ಬ್ರೌನ್ ರೈಸ್
*ಹಸಿರು ಚಹಾ ಅಥವಾ ಕಡಿಮೆ ಕೊಬ್ಬಿನ ಮಜ್ಜಿಗೆ
* ಗಾಜಿನ ಲೋಟದಲ್ಲಿ ಸಂಸ್ಕರಿಸಿದ ನೀರು