ಮಕ್ಕಳ ಸಂಖ್ಯೆ ಕುಸಿತ 
ರಾಜ್ಯ

ಮೂರು ವರ್ಷದಲ್ಲಿ 9 ಲಕ್ಷ ಶಾಲಾ ಮಕ್ಕಳ ಸಂಖ್ಯೆ ಕುಸಿತ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿಯೇ ದಾಖಲೆ ಮಟ್ಟದಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗಿದೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ
  • 2023-24ರಲ್ಲಿ ರಾಜ್ಯದಲ್ಲಿ ಒಟ್ಟು 1.05 ಕೋಟಿ ಮಕ್ಕಳು ದಾಖಲಾಗಿದ್ದರು. 2026-27ನೇ ಶೈಕ್ಷಣಿಕ ವರ್ಷದಲ್ಲಿ 96,21,439 ಮಕ್ಕಳು ದಾಖಲಾಗಿದ್ದಾರೆ
  • ಕರ್ನಾಟಕ ಪಬ್ಲಿಕ್ ಶಾಲೆಗಳು, ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ಕನಿಷ್ಠ ಶೇ.10ರಿಂದ 15ರಷ್ಟು ದಾಖಲಾತಿ ಹೆಚ್ಚಳವಾಬೇಕು ಎಂಬ ಸೂಚನೆ ಹೊರತಾಗಿಯೂ ಸರ್ಕಾರಿ ಶಾಲೆಗಳಲ್ಲಿ ಗುರಿ ಮುಟ್ಟಿಲ್ಲ
ಎನ್.ಎಲ್. ಶಿವಮಾದು
ಬೆಂಗಳೂರು:

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಶಾಲಾ ಮಕ್ಕಳ ಸಂಖ್ಯೆ ದಾಖಲೆ ಮಟ್ಟದಲ್ಲಿ ಕುಸಿಯುತ್ತಿದೆ. 2025-26ನೇ ಶೈಕ್ಷಣಿಕ ವರ್ಷಕ್ಕಿಂತ 2026-27ನೇ ಶೈಕ್ಷಣಿಕ ವರ್ಷದಲ್ಲಿ 4 ಲಕ್ಷ ಮಕ್ಕಳ ಸಂಖ್ಯೆ ಕುಸಿದಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು ಒಟ್ಟಾರೆ 9 ಲಕ್ಷ ಮಕ್ಕಳ ಸಂಖ್ಯೆಕುಸಿತವಾಗಿದೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗಿದೆ ಎಂದಾಕ್ಷಣ ಸರ್ಕಾರ ಶಾಲೆಗಳೇ ಇರಬೇಕು ಎಂದು ಅಂದಾಜಿಸುತ್ತಾರೆ. ವಾಸ್ತವವಾಗಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿಯೇ ದಾಖಲೆ ಮಟ್ಟದಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗಿದೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸೇರಿ 2025-6ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 1,00,28,438 ಮಕ್ಕಳು ದಾಖಲಾಗಿದ್ದರು. 2026-27ನೇ ಶೈಕ್ಷಣಿಕ ಸಾಲಿನ ಶಾಲೆಗಳು ಮೇ ಕೊನೆಯ ವಾರದಲ್ಲಿ ಆರಂಭವಾಗಿದ್ದರೂ ದಾಖಲಾತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯು ಜು.31ರವರೆಗೂ ಸಮಯ ನೀಡಿತ್ತು. ಆ ಪ್ರಕಾರ, 96,21,439 ಮಕ್ಕಳು ದಾಖಲಾಗಿದ್ದಾರೆ. ಅಂದರೆ, 4,06,999 ಮಕ್ಕಳು ಕಡಿಮೆಯಾಗಿದ್ದಾರೆ.

ಖಾಸಗಿ ಶಾಲೆಗಳಲ್ಲಿಯೇ ಹೆಚ್ಚು ಕುಸಿತ:

ಶಾಲಾ ಶಿಕ್ಷಣ ಇಲಾಖೆಯ ದತ್ತಾಂಶಗಳ ಪ್ರಕಾರ, 2025-26ರಲ್ಲಿ ಸರ್ಕಾರಿ ಶಾಲೆಯಲ್ಲಿ 36,56,613 ಮಕ್ಕಳಿಂದ ಈ ವರ್ಷ 35,36,214ಕ್ಕೆ ಕುಸಿದಿದೆ. ಅನುದಾನಿತ ಶಾಲೆಗಳಲ್ಲಿ 11,17,671ರಿಂದ 10,32,397ಕ್ಕೆ ಕುಸಿದಿದೆ. ಖಾಸಗಿ ಶಾಲೆಗಳಲ್ಲಿ 48,77,560ರಿಂದ 47,00,905ಕ್ಕೆ ಇಳಿಕೆಯಾಗಿದೆ. ಸರ್ಕಾರಿ ಶಾಲೆಯಲ್ಲಿ 1,20,399, ಅನುದಾನಿತ ಶಾಲೆಗಳಲ್ಲಿ 85,279 ಮತ್ತು ಖಾಸಗಿ ಶಾಲೆಗಳಲ್ಲಿ 1,76,675 ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸ್ಥಳೀಯ ಸಂಸ್ಥೆಗಳ ಶಾಲೆಗಳು ಸೇರಿ ಇತರೆ ವರ್ಗದಲ್ಲಿ ಪರಿಗಣಿಸುವ ಶಾಲೆಗಳಲ್ಲಿ 3.76 ಲಕ್ಷದಿಂದ 3.51 ಲಕ್ಷಕ್ಕೆ ಕುಸಿದಿದೆ.

ಮೂರು ವರ್ಷದಲ್ಲಿ 9 ಲಕ್ಷ ಕಡಿತ:

2023-24ರಲ್ಲಿ ರಾಜ್ಯದಲ್ಲಿ ಒಟ್ಟು 1.05 ಕೋಟಿ ಮಕ್ಕಳು ದಾಖಲಾಗಿದ್ದರು. ಇದರಲ್ಲಿ ಸರ್ಕಾರಿ ಶಾಲೆಯಲ್ಲಿ 42.94 ಲಕ್ಷ, ಅನುದಾನಿತ ಶಾಲೆಗಳಲ್ಲಿ 12.31 ಲಕ್ಷ ಮತ್ತು ಖಾಸಗಿ ಶಾಲೆಗಳಲ್ಲಿ
ಕೆಪಿಎಸ್, ದ್ವಿಭಾಷಾ ಮಾಧ್ಯಮ ಆರಂಭಿಸಿದ್ರೂ ಗುರಿ ಮುಟ್ಟಿಲ್ಲ
ಸರ್ಕಾರಿ ಶಾಲೆಗಳ ವಿಚಾರದಲ್ಲಿ ಶತಾಯಗತಾಯ ದಾಖಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂಬ ಉದ್ದೇಶದಿಂದ ಕಳೆದ ನವೆಂಬರ್‌ನಿಂದಲೇ ದಾಖಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆಯು ನಿರ್ಧರಿಸಿ ದಾಖಲಾತಿ ಹೆಚ್ಚಳಕ್ಕೆ ಏನು ಮಾಡಬೇಕೆಂಬ ವೇಳಾಪಟ್ಟಿಯನ್ನು ಸಹ ಪ್ರಕಟಿಸಿತ್ತು.
ಆ ಪ್ರಕಾರ ಕರ್ನಾಟಕ ಪಬ್ಲಿಕ್ ಶಾಲೆಗಳು, ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ಕನಿಷ್ಠ ಶೇ.10ರಿಂದ 15ರಷ್ಟು ದಾಖಲಾತಿ ಹೆಚ್ಚಳವಾಬೇಕು ಎಂಬ ಸೂಚನೆಯನ್ನು ಕೂಡ ನೀಡಲಾಗಿತ್ತು. ಇದೆಲ್ಲದರ ಹೊರತಾಗಿಯೂ ಸರ್ಕಾರಿ ಶಾಲೆಗಳಲ್ಲಿ ತನ್ನ ಗುರಿ ಮುಟ್ಟುವಲ್ಲಿ ವೈಲ್ಯವಾಗಿರುವುದು ದತ್ತಾಂಶಗಳಿಂದ ಬಹಿರಂಗವಾಗಿದೆ.

ದತ್ತಾಂಶ ನೀಡುವಲ್ಲಿ ದಾರಿ ತಪ್ಪಿಸಿದ ಶಿಕ್ಷಣ ಇಲಾಖೆ

ಕಳೆದ ವರ್ಷ ಶಿಕ್ಷಣ ಇಲಾಖೆಯು 2025ರ ಆ.1ರಂದು ನೀಡಿರುವ ದತ್ತಾಂಶಗಳ ಪ್ರಕಾರ, 2025-26ರಲ್ಲಿ ಸರ್ಕಾರಿ ಶಾಲೆಯಲ್ಲಿ 38.20 ಲಕ್ಷ, ಅನುದಾನಿತ 11.09 ಲಕ್ಷ ಮತ್ತು ಖಾಸಗಿ ಶಾಲೆಗಳಲ್ಲಿ 46.66 ಲಕ್ಷ ಸೇರಿ ಒಟ್ಟು 99.47 ಲಕ್ಷ ಮಕ್ಕಳು ದಾಖಲಾಗಿದ್ದರು ಎಂಬ ದತ್ತಾಂಶವನ್ನು ನೀಡಿತ್ತು. ಆದರೆ, ಈ ಬಾರಿಯ ದತ್ತಾಂಶಗಳು ವ್ಯತಿರಿಕ್ತವಾಗಿರುವುದು ತಿಳಿದು ಬಂದಿದೆ.

ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ

ಮಕ್ಕಳ ಸಂಖ್ಯೆ ಕುಸಿತಕ್ಕೆ ಕಾರಣವೇನು?

- ಒತ್ತಡದ ಜೀವನ, ಬದಲಾದ ಜೀವನಶೈಲಿಯಿಂದ ಮಕ್ಕಳಾಗುವ ಲವಂತಿಕೆ ಪ್ರಮಾಣ ಕಡಿಮೆಯಾಗುತ್ತಿರುವುದು
- ಆರ್ಥಿಕ ಅನಿಶ್ಚಿತತೆ ಮತ್ತು ಜೀವನ ನಿರ್ವಹಣೆ ವೆಚ್ಚ ಹೆಚ್ಚಳವಾಗಿರುವುದರಿಂದ ಒಂದೇ ಮಗು ಸಾಕು ಎನ್ನುವವರ ಪ್ರಮಾಣ ಹೆಚ್ಚಳ
- ನಿರುದ್ಯೋಗ ಸಮಸ್ಯೆಯಿಂದ ಹೆಚ್ಚಾಗುತ್ತಿರುವ ವಲಸೆ ಕಾರಣದಿಂದ ಮದುವೆ ಮತ್ತು ಮಕ್ಕಳನ್ನು ಪಡೆಯುವ ಅವಧಿಯನ್ನು ಮುಂದೂಡುವುದು
"

ಒಟ್ಟಾರೆ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಸರ್ಕಾರಿ ಶಾಲೆಯಲ್ಲಿಯೂ ಕಡಿಮೆಯಾಗಿದೆ. ಆದರೆ, ಶೇಕಡಾವಾರು ದಾಖಲಾತಿ ಪ್ರಮಾಣದಲ್ಲಿ ಸರ್ಕಾರಿ ಶಾಲೆಯಲ್ಲಿ ಶೇ.0.3 ಹೆಚ್ಚಳವಾಗಿದೆ. ಶೇ.36.45ರಿಂದ ಶೇ.36.75ಕ್ಕೆ ಹೆಚ್ಚಳವಾಗಿದೆ.

— - ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ