ಸರಗೂರು ತಾಲೂಕಿನ ನುಗು ಜಲಾಶಯದ ಪ್ರವಾಸಿ ಮಂದಿರದ ಆಧುನೀಕರಣ ಕಾಮಗಾರಿಗೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿದರು. ಶಂಭುಲಿಂಗನಾಯಕ, ಎಚ್.ಸಿ. ನರಸಿಂಹಮೂರ್ತಿ, ಮಾರುತಿ ಇತರರಿದ್ದರು. 
ರಾಜ್ಯ

ನುಗು ಜಲಾಶಯ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಬದ್ಧ

ಸರಗೂರು: ರೈತಾಪಿ ಜನರ ಜೀವನಾಡಿಯಾದ ನುಗು ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ನುಗು ಪ್ರವಾಸಿ ಮಂದಿರ ಆಧುನೀಕರಣಕ್ಕೂ ಅನುದಾನ ನೀಡಲಾಗಿದೆ ಎಂದು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ನುಗು ಜಲಾಶಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ 32.69 ಕೋಟಿ ರೂ.ವೆಚ್ಚದಲ್ಲಿ ಹುಲ್ಲಹಳ್ಳಿ, ಕಬಿನಿ ಬಲದಂಡೆ ನಾಲೆ, ನುಗು ಮೇಲ್ದಂಡೆ ನಾಲೆಗಳು, ನುಗು ಪ್ರವಾಸಿ ಮಂದಿರದ ಆಧುನೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೈತರು ತಮ್ಮ ಜಮೀನುಗಳಿಗೆ ನೀರು ಸಮರ್ಪಕವಾಗಿ ತಲುಪುದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಸರ್ಕಾರ ಅನುದಾನ ಮಂಜೂರು ಮಾಡಿದ್ದು ಕೆಲಸ ಶುರುವಾಗಲಿದೆ. ಇದರೊಂದಿಗೆ ಪ್ರವಾಸಿ ಮಂದಿರವೂ ತುಂಬ ಹಳೆಯ ಕಟ್ಟಡವಾಗಿದ್ದು, ಅದನ್ನು ಆಧುನೀಕರಣಗೊಳಿಸಲು ಕ್ರಮವಹಿಸಲಾಗುವುದು. ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾಲೆಗಳು ತುಂಬ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿವೆ. ಅದನ್ನು ಅಧಿಕಾರಿಗಳು ಸರಿಪಡಿಸಬೇಕು ಎಂದರು.
ನಂತರ ನುಗು ಜಲಾಶಯಕ್ಕೆ ಭೇಟಿ ನೀಡಿ, ಜಲಾಶಯದ ಕ್ರೆಸ್ಟ್‌ಗೇಟ್, ನೀರಿನ ಮಟ್ಟ ಜಲಾಶಯದ ಗೋಡೆಗಳನ್ನು ವೀಕ್ಷಣೆ ಮಾಡಿದರು. ನಂತರ ನುಗು ಜಲಾಶಯದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡ ಶಂಭುಲಿಂಗನಾಯಕ, ಬಸವರಾಜು ಮಾತನಾಡಿದರು.
ಆದಿಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಲಂಕೆ ಲಕ್ಷ್ಮಣ್, ಶಿವರಾಜು, ನಂಜನಗೂಡಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಾರುತಿ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಚಂದನ್‌ಗೌಡ, ಮುಖಂಡರಾದ ಬಸವರಾಜು, ಅಭಿನಂದನ್‌ಪಾಟೀಲ್, ಪುಟ್ಟಸ್ವಾಮಿ, ಲೋಕೇಶ್, ಮಹದೇವಣ್ಣ, ಶಾಸಕರ ಆಪ್ತಕಾರ್ಯದರ್ಶಿ ದೆಗ್ಗಲ್‌ಹುಂಡಿ ಮಹೇಶ್, ನೀರಾವರಿ ಇಲಾಖೆ ಎಇಇ ಗುರುಪ್ರಸಾದ್, ನುಗು ನಾಲೆ ವಿಭಾಗ ಎಇಇ ಮಧುಸೂದನ್ ಇನ್ನಿತರರಿದ್ದರು.