ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವಿ ಕುಲಪತಿ ಪ್ರೊ. ಮೋಹನ್‌ಕುಮಾರ್ ಬಿ.ಕೆ. 
ರಾಜ್ಯ

ನೃಪತುಂಗ ವಿವಿ ಘಟಿಕೋತ್ಸವ: ಸಿದ್ದರಾಮಯ್ಯ ಸೇರಿ 6 ಮಂದಿಗೆ ಗೌರವ ಡಾಕ್ಟರೇಟ್

ಪ್ರಮುಖ ಮುಖ್ಯಾಂಶಗಳು

  • 2023-24 ಮತ್ತು 2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 700 ಸ್ನಾತಕ ಮತ್ತು 4,081 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಗೆ ಅರ್ಹ
  • 18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ
  • ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ರಾಮಚಂದ್ರ, ಜಲಸಂಪನ್ಮೂಲ ನಿರ್ವಹಣಾ ತಜ್ಞ ಡಾ. ಕೆ. ಜೈಪ್ರಕಾಶ್, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಮತ್ತು ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಬಿ.ಎಚ್. ಅವರಿಗೆ ಗೌರವ ಡಾಕ್ಟರೇಟ್
ಬೆಂಗಳೂರು: ನೃಪತುಂಗ ವಿಶ್ವವಿದ್ಯಾಲಯದ ಎರಡು ಮತ್ತು ಮೂರನೇ ವರ್ಷದ ಘಟಿಕೋತ್ಸವವು ಜೂ.2ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿ 1,081 ವಿದ್ಯಾರ್ಥಿಗಳಿಗೆ ಪದವಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 6 ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ. ಮೋಹನ್‌ಕುಮಾರ್ ಬಿ.ಕೆ., 2023-24 ಮತ್ತು 2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 700 ಸ್ನಾತಕ ಮತ್ತು 4,081 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿರುತ್ತಾರೆ. ಇದರಲ್ಲಿ 18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜೂ.2ರಂದು ಬೆಳಗ್ಗೆ 11 ಗಂಟೆಗೆ ಸಮಾರಂಭ ನಡೆಯಲಿದ್ದು, ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಮರ್ಶಕ ಪ್ರೊ. ಎಚ್.ಎಸ್. ರಾಘವೇಂದ್ರ ರಾವ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

6 ಮಂದಿಗೆ ಗೌಡಾ:

ಎರಡು ವರ್ಷಗಳಿಗೆ ತಲಾ ಮೂರು ಮಂದಿಯಂತೆ ಆರು ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ರಾಮಚಂದ್ರ, ಜಲಸಂಪನ್ಮೂಲ ನಿರ್ವಹಣಾ ತಜ್ಞ ಡಾ. ಕೆ. ಜೈಪ್ರಕಾಶ್, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಮತ್ತು ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಬಿ.ಎಚ್. ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಒಟ್ಟಾರೆ 20 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು 6 ಹೆಸರಿಗೆ ಅನುಮತಿ ನೀಡಿದ್ದಾರೆಂದು ಕುಲಪತಿ ಪ್ರೊ. ಮೋಹನ್‌ಕುಮಾರ್ ಬಿ.ಕೆ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಮಂಜುನಾಥ ಟಿ.ಎಂ. ಉಪಸ್ಥಿತರಿದ್ದರು.