ವಿವೇಕಾನಂದ ದಾಸನಕೊಪ್ಪ ಹುಬ್ಬಳ್ಳಿ.
ಮಹಾತ್ಮ ಉದ್ಯೋಗ ಖಾತ್ರಿ ಯೋಜನೆಯಡಿ 2026-27ನೇ ಸಾಲಿನ ಕ್ರಿಯಾ ಯೋಜನೆಯನ್ನು ‘ಯುಕ್ತಧಾರ’ ತಂತ್ರಾಂಶದಡಿ (nrega Yuktadhara) ತಯಾರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ.
ಪ್ರತಿವರ್ಷವು ಗ್ರಾಮ ಪಂಚಾಯಿತಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಬೇಕು. ಗ್ರಾಮಸಭೆಗಳಲ್ಲಿ ಸಾರ್ವಜನಿಕರಿಂದ ಅಗತ್ಯವಿರುವ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಮಾಹಿತಿ ಪಡೆದು ಕ್ರಿಯಾ ಯೋಜನೆ ರೂಪಿಸಲಾಗುತ್ತಿತ್ತು. ಕಳೆದ ವರ್ಷ ಆನ್ಲೈನ್ ಮೂಲಕ ಬೇಡಿಕೆ ಸ್ವೀಕರಿಸಲಾಗಿತ್ತು. ಇದೀಗ ಕ್ರಿಯಾ ಯೋಜನೆಗೆ ತಂತ್ರಜ್ಞಾನದ ಸ್ಪರ್ಶ ನೀಡಿದ್ದು, ಇದಕ್ಕಾಗಿ ಯುಕ್ತಧಾರ ತಂತ್ರಾಂಶ ಬಳಸಿಕೊಳ್ಳಲಾಗುತ್ತಿದೆ.
ಈ ಮೊದಲು ಕ್ರಿಯಾ ಯೋಜನೆಗೆ ಸೇರ್ಪಡೆ ಮುಂಚೆ ಭೌತಿಕವಾಗಿ ಸ್ಥಳ ಪರಿಶೀಲನೆ ಮಾಡಿ, ಆ ಜಾಗಕ್ಕೆ ಕಾಮಗಾರಿ ಸೂಕ್ತವಾಗಿದೆಯೋ, ಇಲ್ಲವೋ ಎಂಬುದನ್ನು ತೀರ್ವನಿಸುತ್ತಿರಲಿಲ್ಲ. ಕ್ರಿಯಾ ಯೋಜನೆಯಲ್ಲಿ ಇದೇ ಎಂಬ ಒಂದೇ ಕಾರಣಕ್ಕೆ ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿತ್ತು. ಅಲ್ಲದೆ, ಅನುಷ್ಠಾನದಿಂದಾಗುವ ಪರಿಣಾಮ, ಫಲ ಏನೆಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ.
ಏನಿದು ಯುಕ್ತಧಾರ?: ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಇಸ್ರೋ ಸಂಸ್ಥೆ ಜಂಟಿಯಾಗಿ ಯುಕ್ತಧಾರ ತಂತ್ರಾಂಶ (ಜಿಯೋಸ್ಪೆಷಿಯಲ್ ಪ್ಲಾನಿಂಗ್ ಪೋರ್ಟಲ್) ಅಭಿವೃದ್ಧಿಪಡಿಸಿವೆ. ಭುವನ್ ವ್ಯವಸ್ಥೆ ಹಾಗೂ ಇನ್ನಿತರ ಉಪಗ್ರಹ ಆಧರಿತ ಎಲ್ಲ ಮ್ಯಾಪ್ ವ್ಯವಸ್ಥೆಗಳ ಮಾಹಿತಿ ಯುಕ್ತಧಾರ ತಂತ್ರಾಂಶದಡಿ ಲಭ್ಯವಾಗುತ್ತದೆ. ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ದತ್ತಾಂಶ ಬಳಸಿಕೊಂಡು ಹೊಸ ನರೇಗಾ ಸ್ವತ್ತುಗಳನ್ನು ಸೃಜಿಸಲು ಇದು ಅವಕಾಶ ಕಲ್ಪಿಸುತ್ತದೆ.
ಸಮುದಾಯ ಕಾಮಗಾರಿಗಳಾದ ಕಾಂಕ್ರೀಟ್ ರಸ್ತೆ, ಚರಂಡಿ, ಚೆಕ್ ಡ್ಯಾಂ, ಕಾಲುವೆ, ಅರಣ್ಯೀಕರಣ ಹಾಗೂ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಬದು ಸೇರಿದಂತೆ ಇನ್ನಿತರ ಬೇಡಿಕೆ ಬರುತ್ತವೆ. ಈ ಬೇಡಿಕೆ ಕಾಮಗಾರಿ ಅನುಷ್ಠಾನದ ಸ್ಥಳಕ್ಕೆ ನರೇಗಾ ಹಾಗೂ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ, ಆ ಜಾಗದ ಅಕ್ಷಾಂಶ ಹಾಗೂ ರೇಖಾಂಶದ ಮಾಹಿತಿ ಸಂಗ್ರಹಿಸುವರು. ನಂತರ ಈ ಮಾಹಿತಿಯನ್ನು ಯುಕ್ತಧಾರ ತಂತ್ರಾಂಶದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ಬೇಡಿಕೆ ಬಂದ ಕಾಮಗಾರಿ ಆ ಜಾಗಕ್ಕೆ ಸೂಕ್ತವೇ, ಇಲ್ಲವೇ ಎಂಬುದನ್ನು ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ದತ್ತಾಂಶ ಬಳಸಿಕೊಂಡು ಈ ತಂತ್ರಾಂಶವೇ ನಿರ್ಧರಿಸಲಿದೆ. ಕಾಮಗಾರಿ ಬೇಡಿಕೆಯು ಆ ಸ್ಥಳಕ್ಕೆ ಸೂಕ್ತವಾಗಿದ್ದರೆ, ಮಾತ್ರ ಕ್ರಿಯಾ ಯೋಜನೆಗೆ ಸೇರ್ಪಡೆಯಾಗುತ್ತದೆ. ಇಲ್ಲದಿದ್ದರೆ ಅವಕಾಶ ಸಿಗದು. ಒಂದು ವೇಳೆ ಬೇರೆ ಕಾಮಗಾರಿಗೆ ಜಾಗ ಸೂಕ್ತವಾಗಿದ್ದರೆ, ಅದನ್ನು ಜನರು, ರೈತರಿಗೆ ತಿಳಿಸಿ, ಅವರ ಬೇಡಿಕೆ ಮೇರೆಗೆ ಸೇರಿಸಲಾಗುತ್ತದೆ.
ಮರು ಕಾಮಗಾರಿಗೂ ತಡೆ: ಈಗಾಗಲೇ ವಿವಿಧ ತಂತ್ರಾಂಶ ಬಳಸಿಕೊಂಡು ನರೇಗಾದಡಿ ನಡೆದಿರುವ ಕಾಮಗಾರಿಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಈ ವಿವರವು ಯುಕ್ತಧಾರದಡಿ ಲಭ್ಯವಾಗಲಿದೆ. ಹೀಗಾಗಿ, ಈಗಾಗಲೇ ವಿವಿಧ ಯೋಜನೆಗಳಡಿ ಕಾಮಗಾರಿ ನಡೆದ ಸ್ಥಳಗಳಲ್ಲಿ ಮತ್ತೆ ಅಂಥದ್ದೇ ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸಲು ಯುಕ್ತಧಾರ ಅವಕಾಶ ನೀಡುವುದಿಲ್ಲ. ಇದರಿಂದ ಒಂದೇ ಸ್ಥಳದಲ್ಲಿ ಒಂದೇ ರೀತಿಯ ಕಾಮಗಾರಿಗಳನ್ನು ಪದೇಪದೆ ಮಾಡಲು ಇನ್ನುಮುಂದೆ ಸಾಧ್ಯವಾಗದು.
ಬೇಡಿಕೆ ಸಲ್ಲಿಕೆಗೆ ವಿಳಂಬ: ಪ್ರತಿವರ್ಷ ಇಷ್ಟೊತ್ತಿಗಾಗಲೇ ಕಾಮಗಾರಿಗಳ ಬೇಡಿಕೆ ಸ್ವೀಕರಿಸಲಾಗುತ್ತಿತ್ತು. ಆದರೆ, ಪ್ರಸಕ್ತವಾಗಿ ಹೊಸ ತಂತ್ರಾಂಶದ ಕಾರಣ ವಿಳಂಬವಾಗಿದೆ. ನರೇಗಾ ಸಿಬ್ಬಂದಿಗೆ ಯುಕ್ತಧಾರ ತಂತ್ರಾಂಶ ಬಳಕೆಗೆ ತರಬೇತಿ ನೀಡಲಾಗಿದೆ. ಅಲ್ಲದೆ, ಲಾಗಿನ್ ಐಡಿ ರಚಿಸಿ, ನೀಡಲಾಗಿದೆ. ಜನರಿಂದ ಬೇಡಿಕೆ ಸ್ವೀಕರಿಸಿ, ಸ್ಥಳಕ್ಕೆ ಭೇಟಿ ನೀಡುವ ಕೆಲಸ ಆಗಬೇಕಿದೆ.
ಯುಕ್ತಧಾರ ತಂತ್ರಾಂಶದಿಂದ ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸಬಹುದಾಗಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕರಷಿ ಆಧಾರಿತ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಲಸು ಇದರಿಂದ ಅನುಕೂಲ ಆಗಲಿದೆ. ಡಿಸೆಂಬರ್ನಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ.
| ಮಲ್ಲಿಕಾರ್ಜುನ ತೊದಲಬಾಗಿ, ಉಪಕಾರ್ಯದರ್ಶಿ ಜಿಪಂ ಧಾರವಾಡ