Bengaluru to Zurich Flight 
ರಾಜ್ಯ

ಯುರೋಪ್​ ಪ್ರವಾಸ ಇನ್ಮುಂದೆ ಮತ್ತಷ್ಟು ಸುಲಭ​; ಅಕ್ಟೋಬರ್‌ನಿಂದ ಬೆಂಗಳೂರು - ಜ್ಯೂರಿಕ್​ಗೆ ನೇರ ವಿಮಾನ ಸೇವೆ ಆರಂಭ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿಗರಿಗೆ 'ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್'ನಿಂದ ಗುಡ್​ನ್ಯೂಸ್
  • ಬೆಂಗಳೂರು 'ಜ್ಯೂರಿಕ್' ನಡುವೆ ನೇರ ವಿಮಾನ ಸೇವೆ ಅಕ್ಟೋಬರ್​ನಿಂದ ಆರಂಭ
  • ಸಿಲಿಕಾನ್​ ಸಿಟಿ ಬೆಂಗಳೂರಿನಿಂದ ಯುರೋಪ್​​ಗೆ ಯಾವುದೇ ಕಿರಿಕಿರಿಯಿಲ್ಲದೆ ಪ್ರಯಾಣಿಸುಬಹುದು
ಬೆಂಗಳೂರು: ಬೆಂಗಳೂರಿಗರಿಗೆ 'ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್' (ಸ್ವಿಸ್‌) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್‌ನ ಪ್ರಮುಖ ನಗರ 'ಜ್ಯೂರಿಕ್' ನಡುವೆ ಹೊಸದಾಗಿ (Bengaluru to Zurich Flight) ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.
2026ರ ಅಕ್ಟೋಬರ್‌ನಿಂದ ಈ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದ್ದು, ವಾರದಲ್ಲಿ ಐದು ದಿನ ಈ ಸೇವೆ ಲಭ್ಯವಿರಲಿದೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರು ಜ್ಯೂರಿಕ್ ತಲುಪುವುದು ಮಾತ್ರವಲ್ಲದೆ, ಲುಫ್ತಾನ್ಸಾ ಸಮೂಹದ ಬೃಹತ್ ವಿಮಾನಜಾಲದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಹಲವು ನಗರಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.

ಬೆಂಗಳೂರನ್ನೇ ಆಯ್ದುಕೊಂಡಿದ್ದೇಕೆ ಸ್ವಿಸ್‌?

ಭಾರತದಲ್ಲಿ ಸ್ವಿಸ್ ಏರ್‌ಲೈನ್ಸ್‌ನ ಹೊಸ ತಾಣವಾಗಿ ಈಗ ಬೆಂಗಳೂರು ಸೇರ್ಪಡೆಯಾಗಿದೆ. ಕಾರ್ಪೊರೇಟ್ ಪ್ರಯಾಣಿಕರು, ಐಟಿ ತಂತ್ರಜ್ಞರು, ಪ್ರೀಮಿಯಂ ಪ್ರವಾಸಿಗರು ಮತ್ತು ಯುರೋಪ್-ಅಮೆರಿಕಾಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರಿಂದ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ.
ಬೆಂಗಳೂರು-ಜ್ಯೂರಿಕ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಕರು ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅತ್ಯುತ್ತಮ ಊಟ, ಪ್ರೀಮಿಯಂ ಲೌಂಜ್ ಸೇರಿದಂತೆ ಉತ್ತಮ ಆತಿಥ್ಯವನ್ನು ಸಂಸ್ಥೆ ನೀಡಲಿದೆ. ಹೊಸ ಮಾರ್ಗದ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಸ್ವಿಸ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಮೂಲಕ ಲಭ್ಯವಿದೆ.

ಯಾರು ಏನಂದ್ರು?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್‌) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, "ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜೊತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ಕನೆಕ್ಷನ್ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಒಂದೇ ಟಿಕೆಟ್‌ನಲ್ಲಿ ಯುರೋಪ್‌ಗೆ ಸುಲಭ ಸಂಪರ್ಕ ಸಿಗಲಿದೆ," ಎಂದರು.