notice-to-zomato-hyperpure-unit 
ರಾಜ್ಯ

ಜೊಮ್ಯಾಟೋ ಹೈಪರ್‌ಪ್ಯೂರ್ ಘಟಕಕ್ಕೆ ನೋಟಿಸ್

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಲೇಬಲ್ ಇಲ್ಲದ ಆಹಾರ ಪದಾರ್ಥಗಳು ಪತ್ತೆ

ಬೆಂಗಳೂರು: ಜೊಮ್ಯಾಟೋ ಹೈಪರ್‌ಪ್ಯೂರ್ ಘಟಕದ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಹಾರ ಉತ್ಪನ್ನಗಳ ಪರಿಶೀಲನೆ ನಡೆಸಿದ ವೇಳೆ ಲೋಪದೋಷಗಳು ಕಂಡು ಬಂದಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ, ಆಹಾರ ಸುರಕ್ಷತಾ ವಿಭಾಗ ವತಿಯಿಂದ ಬೆಂಗಳೂರಿನಲ್ಲಿ ಹೋಟೆಲ್ ಹಾಗೂ ಆಹಾರ ದಾಸ್ತಾನು ಮಳಿಗೆಗಳ ಮೇಲೆ ನಡೆಸಿದ ತಪಾಸಣೆ ವೇಳೆ ಆಹಾರ ಪದಾರ್ಥಗಳು, ಮಾಂಸ ಮತ್ತು ಮೀನನ್ನು ನಗರದ ಹೈಪರ್‌ಪ್ಯೂರ್ ಘಟಕದಿಂದ ಸರಬರಾಜು ಆಗಿರುವುದು ತಿಳಿದುಬಂದಿತ್ತು. ಈ ಹಿನ್ನೆಲೆ ಮಂಗಳವಾರ ಈ ಘಟಕದ ಮೇಲೆ ಆಹಾರ ಸುರಕ್ಷತೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು.
ಈ ವೇಳೆ ಆಹಾರ ಪದಾರ್ಥಗಳ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಹಾಗೂ ಆಹಾರ ನಿರ್ವಹಣಾ ಕ್ರಮಗಳ ಕುರಿತು ತಪಾಸಣೆ ನಡೆಸಲಾಯಿತು. ಪರಿಶೀಲನೆ ವೇಳೆ ಚಿಕನ್ (146 ಕೆ.ಜಿ.), ಬೆಳ್ಳುಳ್ಳಿ (40 ಕೆ.ಜಿ.), ಅಕ್ಕಿ (300 ಕೆ.ಜಿ), ಒಣ ಹಣ್ಣುಗಳು (20 ಕೆ.ಜಿ.) ಉಪ್ಪಿನಕಾಯಿ (10.ಕೆ.ಜಿ.) ಮಸಾಲೆ (15 ಕೆ.ಜಿ.), ಸೇರಿ ಅನೇಕ ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಳ ಮೇಲೆ ಎ್ಎಸ್‌ಎಸ್‌ಎಐ ಪರವಾನಗಿ ಲೇಬಲ್ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 40 ಮಾದರಿಗಳನ್ನು ಸಂಗ್ರಹಿಸಿ, ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಘಟಕಕ್ಕೆ ನೋಟಿಸ್ ಜಾರಿಗೊಳಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.