ರಾಜಧಾನಿ ಬೆಂಗಳೂರಿನಲ್ಲಿ ನೀರು, ಆಹಾರ ಮತ್ತು ಗಾಳಿ ಮಲಿನ
ರಾಜಧಾನಿ ಬೆಂಗಳೂರಿನಲ್ಲಿ ನೀರು, ಆಹಾರ ಮತ್ತು ಗಾಳಿ ಮಲಿನಗೊಂಡಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಿದೆ.
ನಗರದಲ್ಲಿ ಧೂಳಿನ ಕಣ, ವಾಹನಗಳಿಂದ ಬಿಡುವ ಹೊಗೆ, ಗಾಳಿಯ ಚಲನೆ ಇಲ್ಲದಿರುವುದು, ಆಟೋಮೊಬೈಲ್, ತೈಲ ಕಾರ್ಖಾನೆಗಳು ಉಗುಳುವ ಹೊಗೆ, ಕೃಷಿ ತ್ಯಾಜ್ಯ, ಮರ ಮತ್ತು ಇದ್ದಿಲು ಸುಡುವಿಕೆಯಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಘನತ್ಯಾಜ್ಯ ಸುಡುವುದು, ಕಟ್ಟಡಗಳ ನಿರ್ಮಾಣ ಕಾಮಗಾರಿನ ಧೂಳು, ಕಾರ್ಬನ್ ಮಾನಾಕ್ಸೆ ಡ್, ನೈಟ್ರೋಜನ್ ಆಕ್ಸೆ ಡ್ ಮತ್ತು ಸೆಲ್ಫರ್ ಡೈ ಆಕ್ಸೆ ಡ್‌ನಂಥ ಹಾನಿಕಾರಕ ಅನಿಲಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.
ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 68-70ರ ಅಸುಪಾಸಿನಲ್ಲಿರುವುವದರಿಂದ ಗಾಳಿ ಉತ್ತಮವಾಗಿಲ್ಲ. ನಗರದಲ್ಲಿ ರಾಷ್ಟ್ರೀಯ ವಾಯು ಗುಣಮಟ್ಟ ಮಾಪನ ಕಾರ್ಯಕ್ರಮ ಜಾರಿಯಲ್ಲಿದೆ. ಬೆಂಗಳೂರು ನಗರದ ವಾಯು ಗುಣಮಟ್ಟವನ್ನು ಒಟ್ಟು 24 ಕೇಂದ್ರಗಳಲ್ಲಿ ಮಾಪನ ಮಾಡಲಾಗುತ್ತಿದೆ. ಈ ಮಾಪನ ಕೇಂದ್ರಗಳಲ್ಲಿ ನಗರದಲ್ಲಿ ಗಾಳಿಯ ಗುಣಮಟ್ಟ 70 ದಾಟಿದೆ. ಎಕ್ಯೂಐ ವ್ಯಾಲ್ಯೂ 50ರ ಒಳಗಡೆ ಇದ್ದರೆ ಗಾಳಿಯ ಗುಣಮಟ್ಟ ಉತ್ತಮ, 51ರಿಂದ 100ರೊಳಗೆ ಇದ್ದರೆ ತೃಪ್ತಿಕರ, 101ರಿಂದ 200ರವರೆಗೆ ಇದ್ದರೆ ಸಾಧಾರಣ, 201ರಿಂದ 300 ಇದ್ದರೆ ಕಳಪೆ ಹಾಗೂ 401ಗಿಂತ ಮೇಲ್ಪಟ್ಟ ಸೂಚ್ಯಂಕವಿದ್ದರೆ ಅತಿ ಕಳಪೆ ಎಂದು ಗುರುತಿಸಲಾಗುತ್ತದೆ. ಉಸಿರಾಡಲು ಗುಣಮಟ್ಟ ಗಾಳಿ ಸಿಗದಿದ್ದರೆ ಉಸಿರಾಟ, ಶ್ವಾಸಕೋಶ ಮತ್ತು ಹೃದಯ ಸೇರಿ ಇತರ ಗಂಭೀರ ಆರೋಗ್ಯದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಮಾ.26ರಂದು ನಡೆದ ಅಧಿವೇಶನದಲ್ಲಿ ಸರ್ಕಾರವೇ ಹೇಳಿದೆ.
ನಗರದಲ್ಲಿ ವರ್ಷವಾರು ಗಾಳಿ ಗುಣಮಟ್ಟ
1348.5 ಎಂಎಲ್‌ಡಿ ಗೃಹ ತ್ಯಾಜ್ಯ ನೀರು ಉತ್ಪತಿ
ಸಾಮಾನ್ಯವಾಗಿ ಕುಡಿಯುವ ನೀರು ‘ಎ’ ಗ್ರೇಡ್‌ನಲ್ಲಿ ಇರಬೇಕು. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ಉತ್ಪತ್ತಿಯಾಗುತ್ತಿರುವ ಗೃಹ ತ್ಯಾಜ್ಯ ಕೊಳಚೆ ನೀರು ಸೂಕ್ತ ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸದೆ ವಿಸರ್ಜಿಸುತ್ತಿರುವುದರಿಂದ ನಗರದಲ್ಲಿ ಜಲಮಾಲಿನ್ಯವಾಗುತ್ತಿದೆ. ಹೆಚ್ಚುವರಿಯಾಗಿ ಉತ್ಪತ್ತಿಯಾಗಿ ಸಂಸ್ಕರಿಸದೆ ಉಳಿದ ಗೃಹ ತ್ಯಾಜ್ಯ ನೀರು ಅಕ್ಕಪಕ್ಕದ ಹಳ್ಳಗಳಿಗೆ ಮತ್ತು ಜಲಮೂಲಗಳಿಗೆ ಸೇರಿ ಜಲ ಮಾಲಿನ್ಯ ಉಂಟಾಗುತ್ತಿದೆ ಎಂದು ಅಧಿವೇಶನದಲ್ಲಿ ಸರ್ಕಾರ ಉತ್ತರ ಕೊಟ್ಟಿದೆ.
ಸರ್ಕಾರದಿಂದ ವಾಯು, ಜಲ ಕಾಯ್ದೆ ಅನುಷ್ಠಾನ
* ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ಸುಪ್ರೀಂಕೋರ್ಟ್ ನಿರ್ದೇಶನದಂತೆ 14 ಅಂಶಗಳು ಜಾರಿ.
* ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ 44 ಅಂಶಗಳು ಕ್ರಿಯಾ ಯೋಜನೆಗಳು ಅನುಷ್ಠಾನ.
* ವಾಯು ಮಾಲಿನ್ಯ ಮೂಲ ಅರಿಯಲು ವಿವಿಧ ಸಂಸ್ಥೆಗಳು ನಡೆಸಿದ್ದ ಅಧ್ಯಯನ ವರದಿ ಆಧಾರಿಸಿ ಕ್ರಿಯಾ ಯೋಜನೆಗಳ ಪರಿಷ್ಕರಣೆ.
* ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ಸಾರಿಗೆ ಇಲಾಖೆ ಸಹಯೋಗದಲ್ಲಿ ವಾಹನಗಳ ತಪಾಸಣೆ.
* ವಾಯು ಮಾಲಿನ್ಯ ಮಾಡುವ ಕಾರ್ಖಾನೆಗಳ ಪರಿವೀಕ್ಷಣೆ.
* ಭೂಭರ್ತಿ ಘಟಕಗಳಲ್ಲಿನ ತೆರೆದ ಜಾಗದಲ್ಲಿ ಮರಗಿಡಗಳ ರಂಬೆ, ಎಲೆ ಸೇರಿ ಯಾವುದೇ ರೀತಿಯ ಘನತ್ಯಾಜ್ಯ ಸುಡುವುದು ನಿಷೇಧ.
* 12 ಹೊಗೆ ಮಾಪನ ಮಾಡುವ ವಾಹನಗಳ ಖರೀದಿ.
* 2020ರಿಂದ ವಾಹನಗಳು ಭಾರತ್ ಸ್ಟೇಜ್ ವಿಐ ಇಂಜಿನ್, ಉರುವಲು ಬಳಸುವುದು ಕಡ್ಡಾಯ.
* ಕಲುಷಿತ ನೀರು ಜಲಮೂಲಗಳಿಗೆ ಸೇರದಂತೆ ನಿಗಾವಹಿಸಲು ಮಾರ್ಷಲ್‌ಗಳ ನಿಯೋಜನೆ.
*ಕೆರೆಗಳ, ರಾಜಕಾಲುವೆ, ಅಕ್ಕಪಕ್ಕ ವಸತಿ ಸಮುಚ್ಛಯಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ವಾಣಿಜ್ಯ ಕಟ್ಟಡಗಳ ಮೇಲೆ ನಿಗಾ.
* ತ್ಯಾಜ್ಯ ನೀರು ಸಂಗ್ರಹಿಸಿ ಸಂಸ್ಕರಿಸಿ ವಿಲೇವಾರಿಗೆ ಸಿಇಟಿಪಿ ಪರಿಕಲ್ಪನೆ ಪರಿಚಯ.
ತರಕಾರಿ, ಸೊಪ್ಪುಗಳಲ್ಲಿ ಸೀಸ ಪತ್ತೆ
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಸೀಸ ಸೇರಿ ಕೀಟನಾಶಕಗಳಂತಹ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಆದ್ದರಿಂದ, ಇವುಗಳನ್ನು ಸೇವಿಸಲು ಯೋಗ್ಯವಾಗಿಲ್ಲ. ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ತರಕಾರಿ, ಸೊಪ್ಪು ಬೆಳೆಯಲಾಗುತ್ತಿದ್ದು, ನಗರದ ಮಾರುಕಟ್ಟೆಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ. 2023ರಲ್ಲಿ ತರಕಾರಿ, ಸೊಪ್ಪು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಇದರಲ್ಲಿ 7 ಮಾದರಿ ಸೊಪ್ಪು ಮತ್ತು 19 ಮಾದರಿ ತರಕಾರಿಗಳಲ್ಲಿ ಸೀಸ ಪತ್ತೆಯಾಗಿತ್ತು. 2024-25 ಮತ್ತು 2025-26ರಲ್ಲಿ ತರಕಾರಿ, ಸೊಪ್ಪುಗಳ 1,323 ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದಾಗ 29 ಮಾದರಿಗಳು ಅಸುರಕ್ಷಿತ ಎಂಬುದು ಕಂಡುಬಂದಿದೆ. ಬದನೆಕಾಯಿ, ತೊಂಡೆಕಾಯಿ, ಹಸಿರೆಲೆ ತರಕಾರಿಗಳು ಮತ್ತು ಸೊಪ್ಪುಗಳಲ್ಲಿ ಸೀಸದ ಪ್ರಮಾಣವು ನಿಗದಿಗಿಂತ ಹೆಚ್ಚಿರುವುದು ವರದಿಯಾಗಿದೆ. ಕೆಲವು ಬಾರಿ ಆರ್ಗ್ಯಾನಿಕ್ ಎಂದು ಮಾರಾಟ ಮಾಡುವ ತರಕಾರಿಗಳಲ್ಲೂ ಅಪಾಯಕಾರಿ ಮಟ್ಟದ ರಾಸಾಯನಿಕಗಳು ಕಂಡುಬರುತ್ತಿದೆ.ಕೈಗಾರಿಕಾ ತ್ಯಾಜ್ಯ ಹಾಗೂ ಕಲುಷಿತ ನೀರನ್ನು ಕೃಷಿಗೆ ಬಳಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಸರ್ಕಾರವೇ ತಿಳಿಸಿವುದು ಆತಂಕ ತಂದೊಡ್ಡಿದೆ.