ಕರ್ನಾಟಕ ಹೈಕೋರ್ಟ್, ಹಿಂದೂ ದೇವತೆಗಳು
- : ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಏನನ್ನಾದರೂ ಮತ್ತು ಎಲ್ಲವನ್ನೂ ಸಹಿಸಲಾಗದು
- ಹಿಂದೂ ದೇವರುಗಳನ್ನು ಅಶ್ಲೀಲವಾಗಿ ಚಿತ್ರಸಿ ಹಂಚುತ್ತಿದ್ದ ವಾಟ್ಸಾಪ್ ಗ್ರೂಪ್
- ಈ ಕೃತ್ಯವನ್ನು ನಡೆಸುದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು: ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಏನನ್ನಾದರೂ ಮತ್ತು ಎಲ್ಲವನ್ನೂ ಸಹಿಸಲಾಗದು ಎಂದು ಶುಕ್ರವಾರ (ಜ.30) ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್ ಭಜರಂಗಿ ಗೋ ಕಳ್ಳರು ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಅದರಲ್ಲಿ, ಹಿಂದೂ ದೇವತೆ (Hindu Gods)ಗಳು ಮತ್ತು ಪ್ರಮುಖ ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿಯ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕುಪ್ಪೆಟ್ಟಿ ಕರಿಯಾ ಗ್ರಾಮದ ಸಿರಾಜುದ್ದೀನ್ ಬಿನ್ ಮೊಹಮದ್ ಇಸ್ಮಾಯಿಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ತಿರಸ್ಕರಿಸಿದೆ.
ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಾಮರಸ್ಯ ಭಂಗಗೊಳಿಸುವ ಪ್ರವೃತ್ತಿ ಕಂಡು ಬರುತ್ತಿದೆ ಮತ್ತು ತನಿಖಾಧಿಕಾರಿಯು ಗ್ರೂಪ್‌ನ ಎಲ್ಲಾ ನಿರ್ವಾಹಕರ ವಿರುದ್ಧ ಏಕರೂಪವಾಗಿ ಮುಂದುವರಿಯಲು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ಇಂತಹ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯರು ಅಶ್ಲೀಲ ಚಿತ್ರಗಳ ಪ್ರಸರಣಕ್ಕೆ ಅವಕಾಶ ನೀಡುವ ಕುಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕುಎಂದು ಹೇಳಿದೆ.
ಇಂತಹ ಗುರುತರ ಗುಣಲಕ್ಷಣಗಳ ಅಪರಾಧದ ತನಿಖೆಯನ್ನು ಮಧ್ಯದಲ್ಲೇ ತಡೆಯಲು ಸಾಧ್ಯವಿಲ್ಲ. ಅಂತೆಯೇ, ಅಪರಾಧವು ಐದು ವರ್ಷಗಳಷ್ಟು ಹಳೆಯದಾಗಿರುವ ಕಾರಣ ತನಿಖಾಧಿಕಾರಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಮುಕ್ತಾಯಗೊಳಿಸಬೇಕು ಎಂದು ತನಿಖಾಧಿಕಾರಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ
ಸಿರಾಜುದ್ದೀನ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಶ್ಲೀಲವಾಗಿ, ಅವಮಾನಕರ ಮತ್ತು ಅಪವಿತ್ರ ರೀತಿಯಲ್ಲಿ ಚಿತ್ರಿಸಿ ಪ್ರಸಾರ ಮಾಡುತ್ತಿದ್ದ.
ಈ ರೀತಿಯ ವಾಟ್ಸ್‌ಆ್ಯಪ್ ಗ್ರೂಪ್‌ಗಳು ಸಮಾಜದಲ್ಲಿ ಗಲಭೆ ಸೃಷ್ವಿಸುವ ಷಡ್ಯಂತ್ರ ಹೊಂದಿವೆ. ಕೋಮು ಹಿಂಸಾಚಾರ ಈ ಗ್ರೂಪ್‌ಗಳ ಗುರಿಯಾಗಿದೆ. ಆದ್ದರಿಂದ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬೆಳ್ತಂಗಡಿಯ ಕದಿರುದ್ಯಾವರದ ಕೆ. ಜಯರಾಜ್ ಸಾಲಿಯಾನ 2020ರ ಜನವರಿಯಲ್ಲಿ ಸೆನ್ (ಸೈಬರ್, ಎಕನಾಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ) ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಮಂಗಳೂರಿನ ಸೆನ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 295(ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು,(ಏಜನ್ಸೀಸ್).