ದೊಡ್ಡಬಳ್ಳಾಪುರ ತಾಲೂಕು ಕೊನಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ರಾಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನಕ್ಕೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಚಾಲನೆ ನೀಡಿದರು. ಸಂಸದ ಡಾ.ಕೆ ಸುಧಾಕರ್, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ಪಿಎಲ್ಡಿಬ್ಯಾಂಕ್ ಅಧ್ಯಕ್ಷ ಶಿವಕುಮಾರ್, ಬಮುಲ್ ನಿರ್ದೇಶಕ ಹರೀಶ್, ಎಸ್ಪಿ ಮುನಿರಾಜು, ಭೈರೇಗೌಡ, ಮುಖಂಡ ಲಕ್ಷ್ಮೀಪತಿ ಇದ್ದರು.
ದೊಡ್ಡಬಳ್ಳಾಪುರ:ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್)ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅಚ್ಚರಿಯ ಹೇಳಿಕೆ ನೀಡಿದರು.
ಕೊನಘಟ್ಟ ಗ್ರಾಮದಲ್ಲಿ ಭಾನುವಾರ ತಾಲೂಕುಮಟ್ಟದ ರಾಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ,ಮಿಶ್ರತಳಿ ಕರುಗಳ ಪ್ರದರ್ಶನ ಮತ್ತು ಎಂಪಿಸಿಎಸ್ ಸಂಘದ 50ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸದ್ಯಕ್ಕೆ ನಾನು ಯಾವುದಕ್ಕೂ ಆಕಾಂಯಲ್ಲ. ನಂದಿನಿ ಹಾಲು, ತುಪ್ಪ ಬಳಸಿ ರೈತರನ್ನು ಉಳಿಸಿ ಎಂದು ಹೇಳುವ ಮೂಲಕ ಜಾರಿಕೊಂಡರು.
ರೈತರು ಸ್ಥಳಿಯವಾಗಿ ಬದುಕು ಕಟ್ಟಿಕೊಳ್ಳಲು, ಸ್ವಾಭಿಮಾನದಿಂದ ಜೀವಿಸಲು ಹೈನುಗಾರಿಕೆ ಸ್ಫೂರ್ತಿ. ದೇಶದಲ್ಲಿ ನಂದಿನಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ರುಚಿ, ಬೆಲೆ, ತೂಕ ಸೇರಿ ಗುಣಮಟ್ಟಕ್ಕೆ ನಂಬಿಕಾರ್ಹವಾಗಿದೆ. ಇದಕ್ಕೆಲ್ಲ ರೈತರೇ ಕಾರಣ ಎಂದರು.
ರಾಜ್ಯಕ್ಕೆ ಹೋಲಿಸಿದರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು ಇದೆ. ತಾಲೂಕಿನಲ್ಲಿ ಈ ಹಿಂದೆ ಪ್ರತಿ ದಿನ 1.80 ಲಕ್ಷ ಲೀಟರನಷ್ಟು ಹಾಲು ಸಂಗ್ರಹಿಸಲಾಗುತ್ತಿತ್ತು. ಆದರೆ, ಈಗ 1.5 ಲಕ್ಷ ಲೀಟರ್ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಕಾರಣ ರೈತರು ಕೃಷಿಯಿಂದ ದೂರ ಉಳಿಯುತ್ತಿರುವುದೇ ಆಗಿದೆ ಎಂದರು.
1 ಲಕ್ಷ ರಬ್ಬರ್ ಮ್ಯಾಟ್ ವಿತರಣೆ: ಮುಂದಿನ 3 ತಿಂಗಳಿನಲ್ಲಿ 1 ಲಕ್ಷ ರಬ್ಬರ್ ಮ್ಯಾಟ್ ವಿತರಿಸಲಾಗುವುದು. ಇನ್ನುಳಿದ 80 ಸಾವಿರ ರಬ್ಬರ ಬ್ಯಾಂಡ್ಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದು ಡಿ.ಕೆ.ಸುರೇಶ್ ಹೇಳಿದರು.
ನಂದಿನಿ ಪ್ಲಾಂಟ್ ನಿಮಾರ್ಣಕ್ಕೆ ಮನವಿ: ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ಮಾತನಾಡಿ, ತಾಲೂಕಿನ ಮೆಣಸಿ ಗೇಟ್ ಬಳಿ ನಂದಿನಿ ಪ್ಲಾಂಟ್ ನಿಮಾರ್ಣಕ್ಕೆ 15 ಎಕರೆ ಸ್ಥಳ ಗುರುತಿಸಿದ್ದು, ಯೋಜನೆ ನನೆಗುದಿಗೆ ಬಿದ್ದಿದೆ. ತಾಲೂಕಿನ ಸಾಕಷ್ಟು ಯುವಕರು ಉದ್ಯೋಗ ಇಲ್ಲದೆ ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ಲಾಂಟ್ ನಿಮಾರ್ಣವಾದಲ್ಲಿ ಯುವಕರ ಬದುಕು ಹಸನಾಗುವುದು ಎಂದು ಡಿ.ಕೆ.ಸುರೇಶ್ ಅವರಿಗೆ ಪ್ಲಾಂಟ್ ನಿಮಾರ್ಣಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಹಾಲಿನ ಉತ್ಪನ್ನಗಳ ಘಟಕ ಸ್ಥಾಪಿಸಲು ಜಮೀನು ಮೀಸಲಿರಿಸಲಾಗಿದೆ. ಈ ಕುರಿತು ಒಕ್ಕೂಟ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಶೇ.50 ಸಬ್ಸಿಡಿ: ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ರೈತರಿಗೆ ಕೃಷಿ ಪ್ರಧಾನ ಕಸುಬು ಆದರೂ ಹೈನುಗಾರಿಕೆಯಿಂದ ಸುಸ್ಥಿರ ಆದಾಯ ಗಳಿಸುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಯುವಕರು ಮಿನಿ ಡೈರಿಗಳ ಸ್ಥಾಪನೆ ಮಾಡಿದರೆ ಶೇ.50 ಸಬ್ಸಿಡಿ ನೀಡಲಾಗುವುದು ಎಂದರು.
ವಿಜೇತರಿಗೆ ಬಹುಮಾನ: ಹಾಲು ಕರೆಯುವ ಸ್ಪರ್ಧೆಯಲ್ಲಿ 60 ಮಿಶ್ರತಳಿ ಹಸುಗಳು ಭಾಗವಹಿಸಿದ್ದು, ಆಚಾರ್ಲಹಳ್ಳಿಯ ಹೇಮಂತ್ 38.9 ಲೀಟರ್ ಹಾಲು ಕರೆದು ಮೊದಲ ಬಹುಮಾನ ಪಡೆದರೆ, 30.55 ಲೀ ಹಾಲು ಕರೆದ ಸುಣ್ಣಘಟ್ಟಹಳ್ಳಿಯ ಲಿಖಿತ್ ದ್ವೀತಿಯ ಹಾಗೂ 29.2 ಲೀ ಹಾಲು ಕರೆದ ಹುಸ್ಕೂರಿನ ಗಜೇಂದ್ರ ತೃತೀಯ ಬಹುಮಾನ ಪಡೆದರು.