ಮಾವು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದ ಹಣ್ಣುಗಳನ್ನು ಗಣ್ಯರು ವೀಕ್ಷಿಸಿದರು.
ಬಾಗಲಕೋಟೆ: ಮಾವು ಬೆಳೆಯಲು ಉತ್ತರ ಕರ್ನಾಟಕ ಸೂಕ್ತ ಪ್ರದೇಶವಾಗಿದ್ದು, ರೈತರು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೆಕು ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.
ತೋಟಗಾರಿಕೆ ವಿವಿ, ತೋಟಗಾರಿಕೆ ಇಲಾಖೆ, ಸಿಬಿಬಿಒ ಜೇನು ಉತ್ಪಾದಕರ ಸಂಘ ಹಾಗೂ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮಾವು ಬೆಳೆಗಾರರಿಗೆ ಉತ್ತೇಜನ ನೀಡುವುದು ಹಾಗೂ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮಾವು ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ತೋವಿವಿಯು ಮುಂದಿನ ದಿನಮಾನಗಳಲ್ಲಿ ಮಾವು ನಿಗಮವನ್ನು ಸ್ಥಾಪಿಸುವ ಕೆಲಸ ಮಾಡಬೇಕಿದೆ. ವಿಶ್ವವಿದ್ಯಾಲಯದಲ್ಲಿ ಮಾವಿನ ತಳಿಗಳ ತಂತ್ರಜ್ಞಾವನ್ನು ತ್ವರಿತವಾಗಿ ಮಾಡಲಾಗುತ್ತಿದೆ. ವಿವಿಧ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜನೆ ಮಾಡಿದೆ ಎಂದರು.
ಭಾರತ ದೇಶ ಸೇರಿದಂತೆ ಇಂದು ೮೪ ದೇಶಗಳಲ್ಲಿ ಮಾವು ಬೆಳೆಯುತ್ತಿದ್ದಾರೆ. ಬೆಳೆದಿರುವ ಮಾವನ್ನು ಕಾರ್ಬನ್ ಮುಕ್ತವಾಗಿ ಮಾಡುವ ವ್ಯವಸ್ಥೆಯಿಂದ ೫೦೦ ವಿಧದ ತಳಿಗಳು ಬಂದಿವೆ. ೨೨ ಮಾವು ಬೆಳೆಯ ಹೊಸ ತಳಿಗಳನ್ನು ಕಂಡುಹಿಡಿದ್ದಾರೆ. ಅವುಗಳು ಯಶಸ್ವಿಯಾಗಿವೆ. ಹೆಚ್ಚು ಹೆಚ್ಚು ಮಾವು ಬೆಳೆಯುವ ಮೂಲಕ ಉತ್ತರ ಕರ್ನಾಟಕ ರೈತರು ಮುಂದೆ ಬರಬೇಕು ಎಂದರು.
ತೋವಿವಿಯ ಮೂಲಕ ಮಾವು ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಈ ಮೂರು ದಿನಗಳ ಕಾಲ ನಡೆಯುವ ಮಾವು ಮೇಳಕ್ಕೆ ಆಗಮಿಸಿ ರೈತರು ಬೆಳೆದ ಮಾವನ್ನು ಖರಿದೀಸಲು ಮುಂದಾಗಬೇಕೆAದು ತಿಳಿಸಿದರು.
ತೋಟಗಾರಿಕೆ ವಿವಿಯ ಪ್ರಭಾರಿ ಕುಲಪತಿ ಡಾ.ತಮ್ಮಯ್ಯ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ಕಲಾದಗಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ.ಪಾಟೀಲ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು, ಪ್ರಗತಿಪರ ರೈತ ಮೋಹನ ದೇಸಾಯಿ, ಮಾಜಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಎಂ.ದೇಸಾಯಿ, ತೋವಿವಿಯ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ವಸಂತ ಗಾಣಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.