ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಈ ದೇಶದ ನೆಲದ ಯಜಮಾನರು ಎಂದರೆ ಆದಿವಾಸಿಗಳು, ಬುಡಕಟ್ಟು ಹಾಗೂ ದಲಿತರು. ಮೂಲ ನಿವಾಸಿಗಳಾದ ಇವರು ಬಂದಮೇಲೆ ಬೇರೆಯವರ ಆಗಮನವಾಗಿದೆ. ದೇಶದ ನಾಯಕತ್ವ, ಮಾಲೀಕತ್ವ ಇವರ ಕೈಯಲ್ಲಿರಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿರ್ಸಾ ಮುಂಡಾ ಆದಿವಾಸಿಗಳ ಮಹಾನ್ ನಾಯಕ. ಬ್ರಿಟಿಷರ ವಿರುದ್ಧ ಹೋರಾಡಿ 30ನೇ ವಯಸ್ಸಿಗೆ ಈ ಲೋಕವನ್ನು ತ್ಯಜಿಸಿದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಬಿರ್ಸಾ ಮುಂಡಾ ಸತ್ತು 150 ವರ್ಷ ಕಳೆದರೂ ಜಾರ್ಖಂಡ್ ಪ್ರತಿಯೊಬ್ಬ ಆದಿವಾಸಿ, ಬುಡಕಟ್ಟು ಜನ ಬಿರ್ಸಾ ಮುಂಡಾ ಜೀವಂತವಾಗಿದ್ದು, ಅವರೇ ನಮ್ಮ ದೈವ ಎಂದು ಭಾವಿಸಿದ್ದಾರೆ ಎಂದರು.
ಎಲ್ಲರಿಗೂ ಸಮಾನ ಹಕ್ಕು, ಸಮಬಾಳು- ಸಮಪಾಲು ಎಂಬುದು ಸ್ವಾತಂತ್ರ್ಯ ಹೋರಾಟದ ಆಶಯವಾಗಿತ್ತು. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಬುಡಕಟ್ಟು, ಅಲೆಮಾರಿ, ಬುಡಕಟ್ಟಿನವರು ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ನಿಮ್ಮಲ್ಲಿ ಕೀಳರಿಮಮೆ ಬರಬಾರದು ಎಂದು ಹರಿಪ್ರಸಾದ್ ಸಲಹೆ ನೀಡಿದರು.