Hemant nimbalakar  
ರಾಜ್ಯ

ರೌಡಿಗಳಿಗೆ ವಾರ್ನಿಂಗ್ ಇಲ್ಲ, ನೇರ ಆದೇಶ

ಪುಂಡರಿಂದ ಕಿರುಕುಳವಾದರೆ ನನಗೇ ಕರೆ ಮಾಡಿ ನಿಂಬಾಳ್ಕರ್ ಖಡಕ್ ಎಚ್ಚರಿಕೆ

ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಐದು ವಿಭಾಗಗಳನ್ನು ರೂಪಿಸಿರುವ ರಾಜ್ಯ ಸರ್ಕಾರ, ಸಂಚಾರ ವಿಭಾಗದ ಪೊಲೀಸ್ ಆಯುಕ್ತರ ಜವಾಬ್ದಾರಿಯ ಜತೆಗೆ ರೌಡಿ ನಿಗ್ರಹ ದಳದ( ಆ್ಯಂಡಿ ರೌಡಿ ಸ್ಕ್ವಾಡ್) ಹೊಣೆಗಾರಿಕೆಯನ್ನೂ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರಿಗೆ ನೀಡಿದೆ. ಎರಡು ಪ್ರಮುಖ ವಿಭಾಗಗಳ ಜವಾಬ್ದಾರಿ ಹೊತ್ತಿರುವ ಅವರು, ನಗರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ ನೀಡುವ ಬಗ್ಗೆ ಮಂಗಳವಾರ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವವರು, ಸಾರ್ವಜನಿಕರಿಗೆ ತೊಂದರೆ ನೀಡುವವರು, ಮಹಿಳೆಯರಿಗೆ ಕಿರುಕುಳ ಕೊಡುವವರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಪರಾಧ ನಿಯಂತ್ರಣ ಹಾಗೂ ನಗರ ಟ್ರಾಫಿಕ್ ಸಮಸ್ಯೆಗಳ ಕುರಿತು ರೌಡಿಗಳಿಗೆ ವಾರ್ನಿಂಗ್ ಇಲ್ಲ ನೇರ ಆದೇಶ, ಇಂದಿನಿಂದ ಎಲ್ಲ ರೌಡಿಗಳು ತಮ್ಮ ಅಕ್ರಮ ಚಟುವಟಿಕೆ ನಿಲ್ಲಿಸಬೇಕು. ಇಲ್ಲದಿದ್ದರೆ ತಕ್ಕ ಶಾಸ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.

* ನಗರದಲ್ಲಿ ಜನಸಾಮಾನ್ಯರಿಗೆ ರೌಡಿಗಳಿಂದ ತೊಂದರೆ, ಕಿರುಕುಳ ಹೆಚ್ಚಾಗುತ್ತಿದೆ? ಇದರ ಬಗ್ಗೆ ನಿಮ್ಮ ನಿಲುವು ಏನು?

ಗೂಂಡಾಗಿರಿ ಮಾಡುವವನು ರೌಡಿ ಅಲ್ಲ, ಜನರಿಗೆ ತೊಂದರೆ ಕೊಡುವಂತ ಪ್ರತಿಯೊಬ್ಬರು ಕಾನೂನಿನಡಿ ರೌಡಿಗಳೇ. ಸಾರ್ವಜನಿಕರು ರೌಡಿಗಳು ಮತ್ತು ಪುಡಿರೌಡಿಗಳಿಂದ ತೋಂದರೆ ಕಿರುಕುಳ ಅನುಭವಿಸುತ್ತಿದ್ದರೆ ಒಂದು ಕರೆ ಅಥವಾ ಮೊಬೈಲ್‌ಗೆ ಸಂದೇಶ, ಇಮೇಲ್, ವಾಟ್ಸ್‌ಪ್‌ನಲ್ಲಿ ಮಾಹಿತಿ ಸಂಚಿಕೊಂಡರೆ ಸಾಕು ತಕ್ಷಣ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಗರದ ಜನತೆ ಶಾಂತಿ-ನೆಮ್ಮದಿಯಿಂದ ಜೀವನ ನಡೆಸಬೇಕಾಗಿದೆ.

*ರಾಜಧಾನಿಗಷ್ಟೇ ಆ್ಯಂಟಿ ರೌಡಿ ನಿಗ್ರಹ ದಳ ಬೇಕಿತ್ತಾ? ಸರ್ಕಾರದ ಪ್ರಮುಖ ಉದ್ದೇಶ ಏನಿತ್ತು?

ಜನರಿಗೆ ತೋಂದರೆ ನೀಡುವ ಆಸಾಮಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜೂಜಾಟ, ಗ್ಯಾಂಬ್ಲರ್ಸ್‌ಗಳು, ವೇಶಾವಾಟಿಕೆ, ಕ್ಲಬ್ ನಡೆಸುವವರು, ಮಹಿಳೆಯರಿಗೆ ತೊಂದರೆ ನೀಡುವವರ ಸಂಖ್ಯೆ ಕೂಡ ಏರಿಕೆಯಾಗಿದೆ. ನಗರದ ಕೆಲ ಏರಿಯಾಗಳಲ್ಲಿ ಜನರಲ್ಲಿ ಭಯ ಹುಟ್ಟಿಸಿಕೊಂಡು ಬದುಕುವವರಿಂದ ಆಗುತ್ತಿರುವ ತೊಂದರೆಗಳ ನಿಯಂತ್ರಣಕ್ಕೆ ಗೂಂಡಾ ಆ್ಯಕ್ಟ್, ಕರ್ನಾಟಕ ಕಂಟ್ರೋಲ್ ಆ್ ಆರ್ಗನೈಜ್ ಕ್ರೈಂ ಆ್ಯಕ್ಟ್ ಹಾಗೂ ಪೊಲೀಸ್ ಮ್ಯಾನ್ಯೂವಲ್ ಸ್ಪಷ್ಟವಾಗಿ ಹೇಳಲಾಗಿದೆ. ಸಾಮಾಜಿಕ ಸ್ವಾಸ್ಥ್ಯಹಾಳು ಮಾಡುವವರು ರೌಡಿಗಳೆಂದು. ಅದರಂತೆ ಕ್ರಮ ಕೈಗೊಳ್ಳಲಾಗುವುದು.

* ಬೆಂಗಳೂರಿನಲ್ಲಿ ಎಷ್ಟು ರೌಡಿಗಳು ಇದ್ದಾರೆ?

ಬೆಂಗಳೂರಿನಲ್ಲಿ ಪ್ರಸ್ತುತ 6ರಿಂದ 7 ಸಾವಿರ ಮಂದಿ ರೌಡಿ ಪಟ್ಟಿಯಲ್ಲಿದ್ದಾರೆ. ಇವರನ್ನು ಎ, ಬಿ ಮತ್ತು ಬಡ್ಡಿಂಗ್ ರೌಡಿಗಳೆಂದು ವರ್ಗೀಕರಿಸಲಾಗಿದೆ. ಕೆಲವರು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಭಾವ ಬೆಳೆಸಿಕೊಂಡು, ಬ್ಯಾನರ್, ಫ್ಲೆಕ್ಸ್ ಹಾಕಿಸಿಕೊಂಡು ದಾದಾಗಳಂತೆ ವರ್ತಿಸುತ್ತಿದ್ದಾರೆ. ಇಂತಹವರ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲೂ ನಿಗಾ ಇಡಲಾಗುವುದು. ಪುಡಿರೌಡಿಗಳು ಅವರದ್ದೇ ಆದ ಏರಿಯಾದಲ್ಲಿ ‘ಅಣ್ಣಾವ್ರ’ತರಾ ಆಗಿದ್ದಾರೆ. ಕಾನೂನು ವಿರೋಧ ಚಟುವಟಿಕೆ ಮಾಡಿದವರು ರೌಡಿ ಪಟ್ಟಿಯಲ್ಲಿದ್ದಾರೆ. ನಾವೇನು ಅವರನ್ನು ಕರೆದುಕೊಂಡು ಬಂದು ಔತಣ ನೀಡಿ ರೌಡಿ ಪಟ್ಟಿಯಲ್ಲಿ ಸೇರಿಸಿಲ್ಲ.

* ರೌಡಿಗಳ ಜತೆ ಕೆಲ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಪಾರ್ಟಿ, ಜನ್ಮದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ? ಅವರ ವಿರುದ್ಧ ಏನು ಕ್ರಮ?

ಗುಂಪು ಗಲಾಟೆ, ಸಾರ್ವಜನಿಕರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ರೌಡಿಗಳ ಪಾತ್ರವಿರುತ್ತದೆ. ಅಂತಹವರೊಂದಿಗೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಅನಗತ್ಯ ಒಡನಾಟ ಹೊಂದಿರುವುದು ಗಂಭೀರ ವಿಚಾರ. ರೌಡಿಗಳ ಜತೆ ಸಂಪರ್ಕ ಹೊಂದಿರುವವರ ಬಗ್ಗೆಯೂ ತನಿಖೆ ನಡೆಸಲಾಗುವುದು. ಅವರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಯಾರೇ ಆಗಿದ್ದರೂ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

* ನಗರದಲ್ಲಿ ಟ್ರಾಫಿಕ್ ಸಮಸ್ಯೆ, ಇದರ ನಿಯಂತ್ರಣಕ್ಕೆ ಏನೇಲ್ಲ ಕ್ರಮ ಕೈಗೊಳ್ಳುವಿರಿ?

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇನ್ನು ಮುಂದೆ ದಂಡ ವಿಧಿಸುವುದಕ್ಕಿಂತ ವಾಹನ ಜಪ್ತಿ ಮಾಡುವ ಕ್ರಮಕ್ಕೆ ಆದ್ಯತೆ ನೀಡಲಾಗುವುದು. ಒನ್‌ವೇ ನಿಯಮ ಉಲ್ಲಂಘನೆ, ಸಿಗ್ನಲ್ ಜಂಪ್, ಹೈಬೀಮ್ ಹೆಡ್‌ಲೈಟ್ ಬಳಕೆ ಹಾಗೂ ರೋಡ್ ರೇಜ್‌ನಂತಹ ಪ್ರಕರಣಗಳಲ್ಲಿ ವಾಹನ ಜಪ್ತಿ ಮಾಡುವ ಕ್ರಮ ಕೈಗೊಳ್ಳುವ ಉದ್ದೇಶವಿದೆ. ವಾಹನ ಸವಾರರು ನ್ಯಾಯಾಲಯದ ಮೂಲಕ ಅನುಮತಿ ಪಡೆದು ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ.

ದಂಡ ವಿಧಿಸಿದರೂ ಕೆಲ ವಾಹನ ಸವಾರರಲ್ಲಿ ನಿಯಮ ಪಾಲನೆಯ ಭಯ ಕಂಡುಬರುತ್ತಿಲ್ಲ. ಎಐ ಕ್ಯಾಮರಾಗಳಿಂದ ದಂಡದ ನೋಟಿಸ್ ಬಂದರೂ ಶೇ.50ರಷ್ಟು ದಂಡ ಪಾವತಿಸಿ ಪ್ರಕರಣ ಮುಗಿಸಿಕೊಳ್ಳಬಹುದು ಎಂಬ ಮನೋಭಾವನೆ ಬೆಳೆದಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಬೀಳುತ್ತಿಲ್ಲ. ಹೀಗಾಗಿ ವಾಹನ ಜಪ್ತಿಯಂತಹ ಕಠಿಣ ಕ್ರಮಗಳ ಮೂಲಕ ನಿಯಮ ಪಾಲನೆಗೆ ಒತ್ತು ನೀಡಲಾಗುವುದು.

100 ದಿನಗಳಲ್ಲಿ ನಗರದಲ್ಲಿ ಬದಲಾವಣೆ ಗುರಿ

ಬೆಂಗಳೂರು ನಗರದ ಸಂಚಾರ ದಟ್ಟಣೆ ಹಾಗೂ ರೌಡಿಗಳ ಚಟುವಟಿಕೆ ನಿಯಂತ್ರಣಕ್ಕೆ 100 ದಿನಗಳ ಗುರಿ ಹಾಕಿಕೊಂಡಿರುವುದಾಗಿ ನಿಂಬಾಳ್ಕರ್ ತಿಳಿಸಿದ್ದಾರೆ.

ನಗರ ಮುಖ್ಯ ಪೊಲೀಸ್ ಆಯುಕ್ತರಿಂದ 100 ದಿನಗಳ ಕಾಲಾವಕಾಶ ಕೇಳಿದ್ದು, ಈ ಅವಧಿಯಲ್ಲಿ ಸಂಚಾರ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು. ಒಂದೇ ವರ್ಷದಲ್ಲಿ ಸುಮಾರು 25 ಸಾವಿರ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಸಂಚಾರ ನಿರ್ವಹಣೆಗೆ ತಾಂತ್ರಿಕ ವ್ಯವಸ್ಥೆಗಳನ್ನೂ ಅಳವಡಿಸಲಾಗುತ್ತಿದೆ. ನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹಾಗೂ ಹಿಂದಿನ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತನ್ ಅವರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆದಿದ್ದೇನೆ. ನಗರದ ಪೀಕ್ ಅವರ್‌ಗಳಲ್ಲಿ ಹೆಚ್ಚು ಸಮಸ್ಯೆ ಎದುರಾಗುವ ಜಂಕ್ಷನ್‌ಗಳನ್ನು ಗುರುತಿಸಿ ಚಾರ್ಟ್ ಸಿದ್ಧಪಡಿಸಲಾಗುತ್ತಿದೆ.

ಸಂಚಾರ ಸಮಸ್ಯೆ ಪರಿಹಾರಕ್ಕೆ ಕೇವಲ ಕಚೇರಿಯಲ್ಲಿ ಕುಳಿತು ಆದೇಶ ನೀಡುವುದರಿಂದ ಪ್ರಯೋಜನವಿಲ್ಲ. ಪೊಲೀಸ್ ಆಯುಕ್ತರಿಂದ ಹಿಡಿದು ಡಿಸಿಪಿ, ಎಸಿಪಿ ಮತ್ತು ಪಿಐ ಹಂತದ ಅಧಿಕಾರಿಗಳು ರಸ್ತೆಯಲ್ಲಿದ್ದು ಸಂಚಾರ ನಿರ್ವಹಣೆಯಲ್ಲಿ ಭಾಗಿಯಾಗಬೇಕು ಎಂಬುದು ನಮ್ಮ ಆಶಯ. ನನ್ನ ಕಚೇರಿ ಕೇವಲ ನಾಲ್ಕು ಗೋಡೆಗಳ ನಡುವಿನ ಕಟ್ಟಡವಲ್ಲ. ಸಾರ್ವಜನಿಕ ರಸ್ತೆಯೇ ನನ್ನ ಕಚೇರಿ. ನಾನೂ ರಸ್ತೆಯಲ್ಲಿದ್ದು ಸಮಸ್ಯೆಗಳನ್ನು ನೇರವಾಗಿ ಗಮನಿಸಬೇಕು. ಆಗ ಮಾತ್ರ ಜನರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡುತ್ತದೆ.