ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಗುರುವಾರ ನಂಜನಗೂಡು ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. 
ರಾಜ್ಯ

ವಿದ್ಯುತ್ ವಲಯ ಖಾಸಗೀಕರಣ ಬೇಡ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
  • ಊಟಿ-ಮೈಸೂರು ಮುಖ್ಯ ರಸ್ತೆಯಲ್ಲಿರುವ ಕೆಪಿಟಿಸಿಎಲ್ ವಿಭಾಗೀಯ ಕಚೇರಿ
ನಂಜನಗೂಡು: ರಾಜ್ಯ ಸರ್ಕಾರ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಊಟಿ-ಮೈಸೂರು ಮುಖ್ಯ ರಸ್ತೆಯಲ್ಲಿರುವ ಕೆಪಿಟಿಸಿಎಲ್ ವಿಭಾಗೀಯ ಕಚೇರಿ ಮುಂಭಾಗ ಜಮಾಯಿಸಿದ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರದ ಕೂಗಿ ಆಕ್ರೋಶ ಹೊರ ಹಾಕಿದರು.
ರೈತ ಸಂಘ ಮತ್ತು ಹಸಿರು ಸೇನೆತ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ,ರಾಜ್ಯ ಸರ್ಕಾರ 15 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಘಟಕಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಲಕ್ಷಾಂತರ ರೈತರ ಪಂಪ್‌ಸೆಟ್ ಮತ್ತು ಹಳ್ಳಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಖಾಸಗೀಕರಣದಿಂದ ಲಾಭ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ಮಾರಾಟ ಮಾಡಲು ಬಿಡುವುದಿಲ್ಲ ಎಂದರು.
ವಿದ್ಯುಚ್ಛಕ್ತಿ, ನೀರು ಹಾಗೂ ಲೋಕೋಪಯೋಗಿ ಸೇರಿದಂತೆ ಸಾರ್ವಜನಿಕ ಸರ್ಕಾರಿ ಸಂಸ್ಥೆಗಳು ಸರ್ಕಾರದ ಹಿಡಿತದಲ್ಲಿಯೇ ನಿರ್ವಹಿಸಬೇಕು. ಯಾವ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ನೀಡಬಾರದು ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು. ಹಾಗಾಗಿ ಟಾಟ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸದೆ ರಾಜ್ಯದ ಗ್ರಾಹಕ ವರ್ಗದ ಹಿತದೃಷ್ಟಿಯಿಂದ ತಿರಸ್ಕರಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್‌ರಾವ್ ಮಾತನಾಡಿ, ಸಾರ್ವಜನಿಕರಿಗೆ ಮೂಲ ಸೌಕರ್ಯ ನೀಡುವ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು ಮತ್ತು ಲಾಭಕ್ಕಾಗಿ ಬಳಸಬಾರದು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಎಲ್ಲ ಇಲಾಖೆಗಳನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದ್ದು, ಅಧಿಕಾರಿಗಳು ಕೂಡ ಈ ಬಗ್ಗೆ ಯೋಚಿಸಿ ಸಂಘಟನೆಗಳ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿದ್ದು, ಅವುಗಳನ್ನು ಭರ್ತಿ ಮಾಡುವ ಬದಲು ಸರ್ಕಾರ ಕಾಲಹರಣ ಮಾಡುತ್ತಿದೆ. ಪರಿಜ್ಞಾನವಿಲ್ಲದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಿದರೆ ಕೆಲಸ ಮಾಡುವ ಅಧಿಕಾರಿಗಳು ಖಾಸಗಿ ಸಂಸ್ಥೆಯಲ್ಲಿ ದುಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸೂರಹಳ್ಳಿ ಮಹದೇವ ನಾಯಕ, ಪಟ್ಟಣ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ನಂಜುಂಡ, ಸಿಂಧುವಳ್ಳಿ ಮಹದೇವ ನಾಯಕ, ಪ್ರಧಾನ ಕಾರ್ಯದರ್ಶಿ ದೇವರಾಜ್, ರವಿಚಂದ್ರ, ಹಳ್ಳಿ ದಿಡ್ಡಿ ರವಿ, ಮಂಜು, ಪ್ರಕಾಶ್, ಮನು, ವೆಂಕಟೇಶ್, ಮಂಜುನಾಥ್ ಇತರರಿದ್ದರು.