High court 
ರಾಜ್ಯ

ಫುಟ್​ಪಾತ್ ತೆರವು ಕಾಯಾರ್ಚರಣೆಗೆ ತಡೆಯಿಲ್ಲ| High court

ಪ್ರಮುಖ ಮುಖ್ಯಾಂಶಗಳು

  • ಪಿಐಎಲ್​ ವಿಚಾರಣೆ ವೇಳೆ ತಿಳಿಸಿದ ಹೈಕೋರ್ಟ್​
  • ಪಾದಚಾರಿಗಳ ಮುಕ್ತ ಸಂಚಾರಕ್ಕೆ ಆದ್ಯತೆ

ಬೆಂಗಳೂರು: 

ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಮ್ಮಿಕೊಂಡಿರುವ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನಕ್ಕೆ ತಡೆ ನೀಡಲು ಹೈಕೋರ್ಟ್​ ನಿರಾಕರಿಸಿದೆ. ಪಾದಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ಆರ್​. ರಾಜಗೋಪಾಲನ್​ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್​) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿಗಳಾದ ಕೆ.ಎಸ್​. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಪಾದಚಾರಿಗಳು ಅಡೆತಡೆಯಿಲ್ಲದೆ ಫುಟ್​ಪಾತ್​ನಲ್ಲಿ ಓಡಾಡುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ರೂಪಿಸಲಾಗಿದೆ. ಆದ್ದರಿಂದ ಅಭಿಯಾನಕ್ಕೆ ತಡೆ ನೀಡಲು ಯಾವುದೇ ಕಾರಣಗಳು ಕಂಡುಬರುತ್ತಿಲ್ಲ ಎಂದು ಹೇಳಿದೆ.

ಸ್ವತಃ ವಾದ ಮಂಡಿಸಿದ ಅರ್ಜಿದಾರರು, ಜಿಬಿಎ ಈ ಅಭಿಯಾನವನ್ನು ಅವೈಜ್ಞಾನಿಕವಾಗಿ ಮಾಡುತ್ತಿದೆ. ಕಾರ್ಯಾಚರಣೆಯ ವ್ಯಾಪ್ತಿಯ ಬಗ್ಗೆ ಸ್ಪಷ್ಟಪಡಿಸಲಾಗಿಲ್ಲ. ಫುಟ್​ಪಾತ್​ ತೆರವುಗೊಳಿಸುವ ವಿಧಾನ ಮತ್ತು ತೆರವುಗೊಳಿಸಿದ ನಂತರದ ನಿರ್ವಹಣೆಯ ವಿಷಯಗಳು ಗೊಂದಲಮಯವಾಗಿದೆ ಎಂದರು. ಆಗ ಪ್ರತಿಕ್ರಿಯಿಸಿದ ನ್ಯಾಯಪೀಠ, ಫುಟ್​ಪಾತ್​ ಅತಿಕ್ರಮಣ ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಸುಲಭವಾಗಿ ಓಡಾಡಲು ಸ್ಥಳಾವಕಾಶ ಕಲ್ಪಿಸಬೇಕು ಎಂದು ಮಾತ್ರ ಸರ್ಕಾರದ ಆದೇಶ ಹೇಳುತ್ತದೆ ಎಂದು ತಿಳಿಸಿತು. 

ಸರ್ಕಾರಕ್ಕೆ ನೋಟಿಸ್​ ಜಾರಿ:

2014ರ ಬೀದಿಬದಿ ವ್ಯಾಪರಿಗಳ ಕಾಯ್ದೆ, 2019ರ ಕರ್ನಾಟಕ ಬೀದಿಬದಿ ವ್ಯಾಪಾರಿಗಳ (ರಕ್ಷಣೆ ಮತ್ತು ನಿಯಂತ್ರಣ) ನಿಯಮಗಳ ಅಡಿಯಲ್ಲಿ ರೂಪಿಸಿರುವ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸೂಚಿಸಬೇಕು. ಟೌನ್​ವೆಂಡಿಗ್​ ಸಮಿತಿಯ ರಚನೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ಮನವಿಗೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಜಿಬಿಎಗೆ ಹೈಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ. ಕಾಯ್ದೆಗಳ ಅನುಷ್ಠಾನದ ಈಗಿನ ಸ್ಥಿತಿಗತಿ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಮುಂದಿನ ವಿಚಾರಣೆ ಡಿ.3ಕ್ಕೆ ನಿಗದಿಯಾಗಿದೆ.