ವೇತನ ಇಲ್ಲದೆ ನರೇಗಾ ಹೊರಗುತ್ತಿಗೆ ನೌಕರರ ಪರದಾಟ 
ರಾಜ್ಯ

ನರೇಗಾ ಹೊರಗುತ್ತಿಗೆ ನೌಕರರ ಗೋಳಾಟ

ಮಂಜುನಾಥ ಎಸ್​. ಅಂಗಡಿ ಧಾರವಾಡ
ನರೇಗಾ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ವರದಾನವಾಗಿದೆ. ಪಂಚಾಯಿತಿಗಳಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಕೂಲಿಕಾರರನ್ನು ಬಳಸಿ ಅವರಿಗೆ ಸ್ವಂತ ಊರಲ್ಲೇ ಉದ್ಯೋಗ ನೀಡುವ ಯೋಜನೆ ಇದು. ಸರ್ಕಾರದ ಹತ್ತಾರು ಯೋಜನೆಗಳನ್ನು ಅನುಷ್ಠಾನ ಮಾಡುವ ಉದ್ಯೋಗ ಖಾತ್ರಿ ಹೊರಗುತ್ತಿಗೆ ನೌಕರರ ಸ್ಥಿತಿ ಬೀದಿಗೆ ಬರುವಂತಿದೆ. 5 ತಿಂಗಳಿಂದ ವೇತನ ಮತ್ತು ಪ್ರವಾಸ ಭತ್ಯೆ ಇಲ್ಲದೆ ನೌಕರರು ಪರದಾಡುತ್ತಿದ್ದಾರೆ.
ಪಂಚಾಯಿತಿಗಳಿಂದ ಉದ್ಯೋಗ ಖಾತ್ರಿ ಕಾಮಗಾರಿಗಳು ಅನುಷ್ಠಾನವಾಗಲು ಈ ನೌಕರರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕಾಮಗಾರಿ ಸ್ಥಳ ಭೇಟಿ, ಜಿಪಿಎಸ್​, ಕೂಲಿಕಾರರ ಎನ್​ಎಂಎಂಎಸ್​ ಹಾಜರಿ ಹಾಕುವುದು, ಅಂಕಿ ಸಂಖ್ಯೆ ನಿರ್ವಹಣೆ ಸೇರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ 15 ಸಾವಿರ ರೂಪಾಯಿಯಿಂದ 50 ಸಾವಿರ ರೂ.ವರೆಗೆ ವೇತನ ನಿಗದಿಯಾಗಿದೆ. ಆದರೆ, ತಾಂತ್ರಿಕ ಕಾರಣದ ನೆಪವೊಡ್ಡಿ ಆಗಸ್ಟ್​ನಿಂದ ಈವರೆಗೆ ವೇತನ ಬಿಡುಗಡೆ ಮಾಡಿಲ್ಲ.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಕಾಯಂ ನೌಕರರಿಗಿಂತ ಹೊರಗುತ್ತಿಗೆ ನೌಕರರೇ ಹೆಚ್ಚು. ಜಿಲ್ಲಾ ಪಂಚಾಯಿತಿ, ತಾ.ಪಂ., ಗ್ರಾ.ಪಂ.ಗಳಲ್ಲಿ ನರೇಗಾ ಅಡಿ ವಿವಿಧ ಹುದ್ದೆಗಳನ್ನು ಗುತ್ತಿಗೆ ನೌಕರರು ನಿರ್ವಹಿಸುತ್ತಿದ್ದಾರೆ.
ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ (ಎಡಿಪಿಸಿ), ಜಿಲ್ಲಾ ಎಂಐಎಸ್​ ಸಂಯೋಜಕರು (ಡಿಎಂಐಎಸ್​), ಜಿಲ್ಲಾ ಐಇಸಿ ಸಂಯೋಜಕರು (ಡಿಐಇಸಿ), ಅಕೌಂಟ್ಸ್​ ಮ್ಯಾನೇಜರ್​, ತಾಲೂಕು ಪಂಚಾಯಿತಿಯ ಆಡಳಿತ ಸಹಾಯಕರು, ತಾಲೂಕು ಎಂಐಎಸ್​ ಸಂಯೋಜಕರು (ಟಿಎಂಐಎಸ್​), ತಾಲೂಕು ತಾಂತ್ರಿಕ ಸಂಯೋಜಕರು (ಟಿಸಿ), ತಾಲೂಕು ಐಇಸಿ ಸಂಯೋಜಕರು (ಟಿಐಇಸಿ), ತಾಂತ್ರಿಕ ಸಹಾಯಕರು (ಟಿಎ), ಗ್ರಾಮ ಕಾಯಕ ಮಿತ್ರ (ಜಿಕೆಎಂ), ಬಿಎ್​ಟಿ (ಬರಿಗಾಲಿನ ತಂತ್ರಜ್ಞ), ಕಾಯಕ ಬಂಧು, ಎಡ್ಮಿನ್​ ಅಸಿಸ್ಟಂಟ್​, ಡಾಟಾ ಎಂಟ್ರಿ ಆಪರೇಟರ್​ಗಳು ನರೇಗಾ ಅಡಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಎಂಎಸ್​ಡಬ್ಲು, ಬಿಇ ಸಿವಿಲ್​, ಬಿಎಸ್​.ಸಿ ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ, ಎಂ.ಕಾಂ, ಎಂಸಿಎ ಪದವೀಧರರಾಗಿದ್ದಾರೆ.
ಜೀವನ ನಿರ್ವಹಣೆ ಕಷ್ಟ:
ಜಿಲ್ಲೆಯಲ್ಲಿ ನರೇಗಾ ಹೊರಗುತ್ತಿಗೆ ನೌಕರರ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಇದ್ದವರಿಗೇ ಹೆಚ್ಚುವರಿ ಹೊಣೆ ಹೊರಿಸಲಾಗುತ್ತಿದೆ. ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ವೇತನ ಬಿಡುಗಡೆಗಾಗಿ ಸಚಿವ, ಶಾಸಕರು, ಅಧಿಕಾರಿಗಳ ಮೊರೆ ಹೋಗಿದ್ದಾರೆ. 5 ತಿಂಗಳ ಬಾಕಿ ವೇತನವಾಗುವವರೆಗೆ ಕೆಲಸದಿಂದ ದೂರ ಉಳಿಯಲು ಯೋಜಿಸಿದ್ದಾರೆ. ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂದಿಂದ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ಎಚ್ಚರಿಸಿದ್ದಾರೆ.
"

ಕೂಲಿಕಾರರಿಗೆ ಕೂಲಿ ಒದಗಿಸುವ ಮಹತ್ವದ ಯೋಜನೆಯಡಿ ರಾಜ್ಯಾದ್ಯಂತ ಸುಮಾರು 2,500 ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದೇವೆ. 5 ತಿಂಗಳ ವೇತನ ಮತ್ತು ಪ್ರವಾಸ ಭತ್ಯೆ ಬಾಕಿ ಇದೆ. ವೇತನದ ಮೇಲೆ ಅವಲಂಬಿತ ಕುಟುಂಬಗಳು ಪರದಾಡುವಂತಾಗಿದೆ. ನಿಗದಿತ ಸಮಯಕ್ಕೆ ವೇತನ ಪಾವತಿ, ಆರೋಗ್ಯ ವಿಮೆ, ಸೇವಾ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಶ್ರೀದಲ್ಲೇ ಕೆಲಸದಿಂದ ದೂರ ಉಳಿಯುತ್ತೇವೆ.

- ಹೊರಗುತ್ತಿಗೆ ನೌಕರ