ದೇವನಹಳ್ಳಿಯಲ್ಲಿ ಕುರುಬರ ಸಂಘದ ಖಜಾಂಚಿ ಕೆ.ಎಂ.ಕೃಷ್ಣಮೂರ್ತಿ ಸುದ್ದಿಗೋಷ್ಠಿ ನಡೆಸಿದರು. ತಾಲೂಕು ಅಧ್ಯಕ್ಷ ಎಸ್.ಕೆ. ಕೋದಂಡರಾಮಯ್ಯ, ಕುರುಬರ ಸಂದ ತಾಲೂಕು ಉಪಾಧ್ಯಕ್ಷ ಬರ್ಮ ಮುನಿರಾಜು, ಆನಂದ್, ತಾಲೂಕು ನಿದೇರ್ಶಕ ಮುನಿರಾಜು ಇದ್ದರು.
ದೇವನಹಳ್ಳಿ : ಅಹಿಂದ ನಾಯಕನಾಗಿ ಎರಡನೇ ಅವಧಿಗೆ ಮುಖ್ಯಂತ್ರಿಯಾಗಿ ರಾಜ್ಯದಲ್ಲಿ ಬಡವರ ಭಾಗ್ಯದಾತ ಎಂದು ಜನಪ್ರಿಯರಾಗಿರುವ ಸಿದ್ದರಾಮಯ್ಯ ಅವರನ್ನು ಸಕಾರಣವಿಲ್ಲದೆ ಬದಲಿಸುವ ಪ್ರಯತ್ನಕ್ಕೆ ಹೈಕಮಾಂಡ್ ಕೈಹಾಕಬಾರದು ಎಂದು ಕುರುಬರ ಸಂಘದ ಖಜಾಂಚಿ ಕೆ.ಎಂ. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕುರುಬರ ಸಂಘದಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸುತ್ತಾ ಪಂಚಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದವರು ಸಿದ್ದರಾಮಯ್ಯ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಅಗ್ರಗಣ್ಯರಾಗಿದ್ದು, ಅವರಿಗೆ ಇನ್ನೂ ವಯಸ್ಸಿದೆ. ಅವಕಾಶಗಳೂ ಇವೆ. ಅವರೂ ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ. ಆದರೆ ಐದು ವರ್ಷ ಸಂಪೂರ್ಣ ಅವಧಿ ಸಿದ್ದರಾಮಯ್ಯನವರೇ ಸಿ.ಎಂ. ಆಗಿರಲಿ ಎಂದು ಒತ್ತಾಯಿಸಿದರು. ತಾಲೂಕು ಕುರುಬ ಸಂಘದ ಅಧ್ಯಕ್ಷ ಎಸ್.ಕೆ.ಕೋದಂಡರಾಮಯ್ಯ ಮಾತನಾಡಿ, ಶೇ. 80.5 ಇರುವ ಹಿಂದುಳಿದ ವರ್ಗಗಳ ಆಶಾಕಿರಣ ಸಿದ್ದರಾಮಯ್ಯ ಅವರು ಇನ್ನೂ ಎರಡೂವರೆ ವರ್ಷಗಳ ಕಾಲ ಮುಂದುವರಿಯಲೇಬೇಕು ಎಂದು ಒತ್ತಾಯಿಸಿದರು.
ರಾಜ್ಯ ನಿದೇರ್ಶಕರಾದ ಕೇಶವಮೂರ್ತಿ, ಮಂಜುಳಾ, ಮಾಜಿ ನಿದೇರ್ಶಕಿ ಭಾಗ್ಯಾ ರಮೇಶ್, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ತಿಲಕ್, ಮಾಜಿ ಪ್ರಧಾನಕಾರ್ಯದರ್ಶಿ ಸಿ.ಮುನಿರಾಜು, ನೆಲಮಂಗಲ ತಾಲೂಕು ಕಾರ್ಯದರ್ಶಿ ಗಂಗರಾಜು , ಜಿಲ್ಲಾ ಯುವಕ ಸಂಘದ ಕಾರ್ಯದರ್ಶಿ ರವಿ, ಯುವ ಸಂಘದ ಮಂಜುನಾಥ್, ಮಾಜಿ ತಾಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ಮಾದೇಶ , ವಕೀಲರಾದ ರಮೇಶ್ ಇದ್ದರು.