ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹೋಗುವುದಕ್ಕೆ ಯಾರೂ ಬೇಡ ಅಂದಿಲ್ಲ. ನೀವು ದೆಹಲಿಗೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾನು ಹೋಗುವುದಿಲ್ಲ. ನನ್ನನು ಕರೆದರೆ ಮಾತ್ರ ದೆಹಲಿಗೆ ತೆರಳುವೆ ಎಂದರು.
ಅಂದಹಾಗೆ, ರಾಜ್ಯ ರಾಜಕಾರಣ ಇದೀಗ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಸಿಎಂ ಆಗಿ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ ಪರ ಅಹಿಂದ ಸಮುದಾಯ ಬ್ಯಾಟ್ ಬೀಸಿದರೆ, ಡಿಕೆಶಿಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇದರ ನಡುವೆ ಹೈಕಮಾಂಡ್ ಸೂಚನೆಯಂತೆ ಸಿದ್ದು ಮತ್ತು ಡಿಕೆಶಿ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗಿನ ಸಿಎಂ ಚರ್ಚೆ ಕೂತುಹಲ ಮೂಡಿಸಿದೆ.