ಬೆಳಗಾವಿ ನಗರದಲ್ಲಿ ಮಂಗಳವಾರ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟಿಸಿದರು. ರವಿಕುಮಾರ ಕೋಕಿತ್ಕರ, ವಿನಯ ಅಂಗರೋಳಿ, ಬಾಳು ಪವಾರ, ಸಂತೋಷ ಜಾಧವ, ಓಂಕಾರ ಗೋಡ್ಸೆ ಇತರರಿದ್ದರು. 
ರಾಜ್ಯ

ಹಿಜಾಬ್ ಧರಿಸಲು ಅವಕಾಶ ಬೇಡ - ಶ್ರೀರಾಮಸೇನೆ

ಬೆಳಗಾವಿ: ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು. ಬಳಿಕ ಕಾಲೇಜುಗಳಲ್ಲಿ ಕೇಸರಿ ಶಾಲು ವಿತರಿಸಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಮತಬ್ಯಾಂಕ್ ಗಟ್ಟಿಗೊಳಿಸುವ ಉದ್ದೇಶದಿಂದ ಹಿಜಾಬ್ ಧರಿಸಲು ಮರು ಆದೇಶ ಹೊರಡಿಸಿದೆ. ಇದು ಕಲಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಹೀಗಾಗಿ ಕೂಡಲೇ ಆದೇಶ ಮರಳಿ ಪಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದಂತೆ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಶಾಲಾ ಕಾಲೇಜುಗಳ ಎದುರು ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತ್ಕರ, ವಿನಯ ಅಂಗರೋಳಿ, ಬಾಳು ಪವಾರ, ಸಂತೋಷ ಜಾಧವ, ಕುಶಾಲ ಅಂಬೋಳಕರ, ವಿನಯ ಹಂಗರೇಕರ, ಓಂಕಾರ ಗೋಡ್ಸೆ ಇತರರಿದ್ದರು.