ಬೆಂಗಳೂರು: ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಮುಟ್ಟಿನ ದಿನಗಳಲ್ಲಿ ಕಚೇರಿಗೆ ಬಂದು ಅನುಭವಿಸುವ ಕಷ್ಟ, ಸುಸ್ತು ಹಾಗೂ ಮಾನಸಿಕ ಕಿರಿಕಿರಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈಗಾಗಲೇ ಪ್ರತಿ ತಿಂಗಳು ಒಂದು ದಿನದ 'ಮುಟ್ಟಿನ ರಜೆ' (Menstrual Leave) ಘೋಷಿಸಿತ್ತು. ಆದರೆ, ಈ ರಜೆ ಪಡೆಯಲು ಮೇಲಧಿಕಾರಿಗಳ ಅನುಮತಿಗಾಗಿ ಕಾಯಬೇಕಾದ ಕಿರಿಕಿರಿ ಇತ್ತು. ಈಗ ಈ ಜಂಜಾಟಕ್ಕೆ ರಾಜ್ಯ ಸರ್ಕಾರ ತಿಲಾಂಜಲಿ ಹಾಡಿದೆ.
ಮಹಿಳಾ ನೌಕರರು ಇನ್ಮುಂದೆ ತಮ್ಮ 'ಕರ್ತವ್ಯ' ಆ್ಯಪ್ ಮೂಲಕ ರಜೆಗೆ ಅಪ್ಲೈ ಮಾಡಿದರೆ, ಅಧಿಕಾರಿಗಳ ಅನುಮತಿಗೂ ಕಾಯದೆ ಸ್ವಯಂಚಾಲಿತವಾಗಿ ರಜೆ ಮಂಜೂರಾಗಲಿದೆ. ಈ ಸಂಬಂಧ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರ, ಮಹಿಳೆಯರಿಗೆ ಮುಟ್ಟಿನ ರಜೆ ಘೋಷಿಸಿದ್ದರೂ, ಕೆಲ ಕಚೇರಿಗಳಲ್ಲಿ ರಜೆ ಮಂಜೂರು ಮಾಡುವ ಅಧಿಕಾರಿಗಳು ಅನಗತ್ಯ ತಗಾದೆ ತೆಗೆಯುತ್ತಿದ್ದರು. "ಹಿಂದೆ ಇಂಥ ನಿಯಮ ಇರಲಿಲ್ಲ, ಈಗ್ಯಾಕೆ ಬೇಕು?" ಎಂದು ಪ್ರಶ್ನಿಸುವುದು, ಅರ್ಜಿಗಳನ್ನು ಕ್ಲಿಯರ್ ಮಾಡದೆ ತಡೆಹಿಡಿಯುವುದು ಅಥವಾ ಮೆಡಿಕಲ್ ಸರ್ಟಿಫಿಕೇಟ್ ಕೇಳಿ ನೌಕರರನ್ನು ಸತಾಯಿಸುವುದು ಸರ್ಕಾರದ ಗಮನಕ್ಕೆ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಅಧಿಕಾರಿಗಳ ಮೂಗುದಾರಕ್ಕೆ ಕತ್ತರಿ ಹಾಕಿದೆ. ಯಾವುದೇ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲದೆ, ನಿಗದಿತ ನಿಯಮ ಪಾಲಿಸಿ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸುವ ಯಾವುದೇ ವಿವೇಚನಾಧಿಕಾರ ಅಧಿಕಾರಿಗಳಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಹಿಳೆಯರು ಮುಜುಗರವಿಲ್ಲದೆ, ಯಾವುದೇ ಒತ್ತಡವಿಲ್ಲದೆ ರಜೆ ಪಡೆಯಲು ‘ಕರ್ತವ್ಯ’ (Karthavya) ಆ್ಯಪ್ನಲ್ಲಿ ಹೊಸ ಸಿಸ್ಟಮ್ ಅಳವಡಿಸಲಾಗಿದೆ. ಈ ಮುಟ್ಟಿನ ರಜೆಯನ್ನು ಪಡೆಯಲು ಕೆಲ ಸರಳ ನಿಯಮಾವಳಿಯನ್ನು ಹೊರಡಿಸಿದೆ.
ವಯಸ್ಸಿನ ಮಿತಿ: ಅರ್ಜಿದಾರರು 18 ರಿಂದ 52 ವರ್ಷ ವಯೋಮಿತಿಯ ಮಹಿಳಾ ನೌಕರರಾಗಿರಬೇಕು.
ತಿಂಗಳಿಗೆ ಒಂದು ದಿನ ಮಾತ್ರ: ಒಂದು ಕ್ಯಾಲೆಂಡರ್ ತಿಂಗಳಲ್ಲಿ ಕೇವಲ ಒಂದು ದಿನ ಮಾತ್ರ ಈ ರಜೆ ಸಿಗಲಿದೆ.
ಕ್ಯಾರಿ ಫಾರ್ವರ್ಡ್ ಇಲ್ಲ: ಈ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ಸೇರಿಸಿ ಪಡೆಯಲು ಬರುವುದಿಲ್ಲ. ಆಯಾ ತಿಂಗಳಲ್ಲಿಯೇ ಬಳಸಿಕೊಳ್ಳಬೇಕು.
ಕ್ಲಬ್ ಮಾಡುವಂತಿಲ್ಲ: ಈ ರಜೆಯನ್ನು ಸಾಂದರ್ಭಿಕ (CL) ಅಥವಾ ಇತರೆ ಯಾವುದೇ ಗಳಿಕೆ ರಜೆಗಳೊಂದಿಗೆ ಸೇರಿಸಿ ಪಡೆಯಲು ಅವಕಾಶವಿಲ್ಲ.
ಆ್ಯಪ್ ಮೂಲಕ ಆಟೋಮ್ಯಾಟಿಕ್ ಆಗಿ ಮಂಜೂರಾದ ರಜೆಯನ್ನು ಯಾವುದೇ ಮಂಜೂರಾತಿ ಪ್ರಾಧಿಕಾರಿ ಅಥವಾ ಹಿರಿಯ ಅಧಿಕಾರಿಗಳು ತಡೆಹಿಡಿಯುವಂತಿಲ್ಲ, ಪ್ರಶ್ನಿಸುವಂತಿಲ್ಲ ಅಥವಾ ರದ್ದುಪಡಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಖಡಕ್ ಸೂಚನೆ ನೀಡಲಾಗಿದೆ. ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಈ ನಿಯಮವನ್ನು ತಮ್ಮ ಕಚೇರಿಯ ಪ್ರತಿಯೊಬ್ಬ ಮಹಿಳಾ ನೌಕರರಿಗೆ ತಲುಪಿಸಬೇಕು ಎಂದು ಆದೇಶಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯಾದ್ಯಂತ ಸಾವಿರಾರು ಮಹಿಳಾ ನೌಕರರು ನಿರಾಳರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಈ ಹೆಜ್ಜೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.