ನೆಲಮಂಗಲ ಪ್ರವಾಸಿ ಮಂದಿರದಲ್ಲಿ ತಾಲೂಕು ಒಕ್ಕಲಿಗರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ವಕೀಲ ರಘುನಾಥ್​, ಮುಖಂಡ ಚನ್ನಯ್ಯ, ಸುರೇಂದ್ರ, ಪ್ರದಿಪ್​, ಕೆಂಪಯ್ಯ, ಬೂದಿಹಾಲ್​ಕಿಟ್ಟಿ, ಆರ್​.ಪ್ರಮೋದ್​ಕುಮಾರ್​, ಮನುಕುಮಾರ್​, ಬಾವಿಕೆರೆ ರಮೇಶ್​ ಇತರರು ಇದ್ದರು. 
ರಾಜ್ಯ

ಕೆಂಪೇಗೌಡರ ಜಯಂತಿ ಆಚರಣೆಗೆ ಪಕ್ಷ, ಜಾತಿ ಭೇದ ಬೇಡ / NELAMANAGL

ನೆಲಮಂಗಲ : ನಾಡಪ್ರಭು ಕೆಂಪೇಗೌಡರ ಜಯಂತಿಗೆ ತಾಲೂಕಿನ ಎಲ್ಲರೂ ಪಕ್ಷ, ಜಾತಿ ಭೇದ ಮರೆತು ಆಗಮಿಸಬೇಕು ಎಂದು ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್​ ಅಧ್ಯಕ್ಷ ಎಂ.ಕೆ.ನಾಗರಾಜು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಕೊಡುಗೆ ನಾಡಿಗೆ ಅಪಾರ. ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಜೂ.27ರಂದು ತಾಲೂಕು ಆಡಳಿತ ಹಾಗೂ ಒಕ್ಕಲಿಗರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಜಯಂತಿ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 8:30ಕ್ಕೆ ನಗರದ ಪವಾಸಿ ಮಂದಿರದಿಂದ ವಿವಿಧ ಕಲಾತಂಡಗಳೊಂದಿಗೆ ಭಾವಚಿತ್ರವುಳ್ಳ ಬೆಳ್ಳಿರಥದ ಮೆರವಣಿಗೆಯು ನಗರದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿವರೆಗೂ ಸಾಗಲಿದೆ. ಬಳಿಕ ತಾಲೂಕು ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕ್ಷೇತ್ರದಾದ್ಯಂತ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬೂದಿಹಾಲ್​ತಿಮ್ಮರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ತತ್ವ ಆದರ್ಶಗಳು ಎಲ್ಲರಿಗೂ ಸ್ಫೂರ್ತಿದಾಯಕ. ಕೆಂಪೇಗೌಡರು ಕೇವಲ ಒಕ್ಕಲಿಗ ಸಮಾಜಕ್ಕೆ ಮಾತ್ರ ಸಿಮೀತವಲ್ಲ. ಹಾಗಾಗಿ ಜಯಂತಿ ಆಚರಣೆಗೆ ಪ್ರತಿ ಗ್ರಾಮದಿಂದಲೂ ಜನರು ಆಗಮಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ: ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ 12 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಂದು ಪುರಸ್ಕರಿಸಲಾಗುವುದು. ಜತೆಗೆ ಸಮುದಾಯದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಎಂ.ಕೆ.ನಾಗರಾಜು ತಿಳಿಸಿದರು.