ಬೆಂಗಳೂರು: ರಾಜ್ಯಗಳಲ್ಲಿ 2027ರ ಜನವರಿ 1ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ನಡೆಸಲು ಕೇಂದ್ರ ಚುನಾವಣಾ ಆಯೋಗವು ಸೋಮವಾರ ಆದೇಶ ಹೊರಡಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 21ರ ಅಡಿಯಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, 2027ರ ಜನವರಿ 20ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಆಯೋಗವು ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ, ನವೆಂಬರ್ 23ರೊಳಗೆ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಮತ್ತು ಮರುಜೋಡಣೆ ಕಾರ್ಯ ಪೂರ್ಣಗೊಳ್ಳಲಿದೆ. ಡಿಸೆಂಬರ್ 1ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 1ರಿಂದ 31ರವರೆಗೆ ಕಾಲಾವಕಾಶ ನೀಡಲಾಗಿದ್ದು, 2027ರ ಜನವರಿ 14ರೊಳಗೆ ಅವುಗಳನ್ನು ವಿಲೇವಾರಿ ಮಾಡಿ, ಜನವರಿ 20ರಂದು ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಈ ವಿಶೇಷ ಪರಿಷ್ಕರಣೆಯಲ್ಲಿ 2027ರ ಜನವರಿ 1ಕ್ಕೆ 18 ವರ್ಷ ತುಂಬುವ ಯುವ ಮತದಾರರಲ್ಲದೆ, 2027ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂದು ಅರ್ಹತೆ ಪಡೆಯುವ ಭಾವಿ ಮತದಾರರಿಂದಲೂ ಮುಂಗಡ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತದಾರರು ಹೊಸದಾಗಿ ಹೆಸರು ಸೇರಿಸಲು ಫಾಮ್ರ್-6, ಅನಿವಾಸಿ ಭಾರತೀಯರು ಫಾಮ್ರ್-6ಎ, ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಫಾಮ್ರ್-7 ಹಾಗೂ ವಿಳಾಸ ಬದಲಾವಣೆ, ತಿದ್ದುಪಡಿ ಮತ್ತು ದಿವ್ಯಾಂಗರ ಗುರುತು ದಾಖಲಿಸಲು ಫಾಮ್ರ್-8ನ್ನು ಬಳಸಬಹುದಾಗಿದೆ. ಮತದಾರರು ‘ವೋಟರ್ ಸರ್ವಿಸ್ ಪೋರ್ಟಲ್’ ಅಥವಾ ‘ಇಸಿಐನೆಟ್’ ಆಪ್ ಮೂಲಕ ಆನ್ಲೈನ್ನಲ್ಲೂ ಅರ್ಜಿ ಸಲ್ಲಿಸಬಹುದು.
ಮತದಾರರ ಅನುಕೂಲಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1,200ಕ್ಕಿಂತ ಹೆಚ್ಚು ಮತದಾರರು ಇರದಂತೆ ನೋಡಿಕೊಳ್ಳಲು ಆಯೋಗ ಸೂಚಿಸಿದೆ. ಮತದಾರರು ಮತಗಟ್ಟೆ ತಲುಪಲು 2 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸದಂತೆ ಹಾಗೂ ಮತಗಟ್ಟೆಗಳು ನೆಲಮಹಡಿಯಲ್ಲಿರುವಂತೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ನಗರ ಪ್ರದೇಶಗಳ ಬಹುಮಹಡಿ ಅಪಾರ್ಟ್ವೆುಂಟ್ ಸಮುಚ್ಚಯಗಳು ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಸಮೀಕ್ಷೆ ನಡೆಸುವಂತೆ ನಿರ್ದೇಶಿಸಲಾಗಿದೆ. ಒಂದೇ ಮನೆಯಲ್ಲಿ ವಾಸಿಸುವ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಒಂದೇ ಮತಗಟ್ಟೆ ಮತ್ತು ಒಂದೇ ವಿಭಾಗದಲ್ಲಿ ಇರುವಂತೆ ‘ಕುಟುಂಬ ಗುಂಪು’ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ. ಪ್ರತಿ ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಪಕ್ಷಗಳಿಗೆ ಕೋರಲಾಗಿದ್ದು, ಈ ಏಜೆಂಟರು ಮತದಾರರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಿ ದಿನಕ್ಕೆ ಗರಿಷ್ಠ 10 ಅರ್ಜಿಗಳನ್ನು ಬಿಎಲ್ಒಗಳಿಗೆ ಸಲ್ಲಿಸಲು ಅವಕಾಶವಿದೆ. ಪ್ರತಿವಾರ ಹಕ್ಕು ಮತ್ತು ಆಕ್ಷೇಪಣೆ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡುವುದರ ಜತೆಗೆ, ಕರಡು ಮತ್ತು ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಉಚಿತವಾಗಿ ಒದಗಿಸಲು ಸೂಚಿಸಲಾಗಿದೆ.
ಮಹಿಳೆಯರು, ತೃತೀಯಲಿಂಗಿಗಳು, ಬುಡಕಟ್ಟು ಸಮುದಾಯದವರು, ಹಿರಿಯ ನಾಗರಿಕರು, ದಿವ್ಯಾಂಗರು, ವಲಸೆ ಕಾರ್ವಿುಕರು ಮತ್ತು ನಿರಾಶ್ರಿತರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಶಿಬಿರಗಳು ಮತ್ತು ಸಹಾಯ ಕೇಂದ್ರಗಳನ್ನು ತೆರೆಯಲು ಆಯೋಗ ನಿರ್ದೇಶಿಸಿದೆ. ದಿವ್ಯಾಂಗ ಮತದಾರರಿಗೆ ಮತದಾನದ ದಿನದಂದು ಅಗತ್ಯ ಸೌಲಭ್ಯ ಕಲ್ಪಿಸಲು ಅವರ ಮಾಹಿತಿಯನ್ನು ಡೇಟಾಬೇಸ್ನಲ್ಲಿ ದಾಖಲಿಸಿಕೊಳ್ಳಲಾಗುವುದು, ಆದರೆ ಈ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ಬಹಿರಂಗ ಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪರಿಷ್ಕರಣೆ ಅವಧಿಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಇಆರ್ಒ ಮತ್ತು ಬಿಎಲ್ಒಗಳು ಚುನಾವಣಾ ಆಯೋಗದ ನಿಯಂತ್ರಣ ದಲ್ಲಿರುತ್ತಾರೆ. ಕರಡು ಪಟ್ಟಿ ಪ್ರಕಟಣೆಯಿಂದ ಅಂತಿಮ ಪಟ್ಟಿ ಪ್ರಕಟವಾಗುವವರೆಗೆ ಆಯೋಗದ ಪೂರ್ವಾನುಮತಿಯಿಲ್ಲದೆ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ ಹಾಗೂ ಯಾವುದೇ ಹುದ್ದೆಗಳು ಖಾಲಿ ಇರದಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಪಟ್ಟಿಯಿಂದ ಅನಗತ್ಯವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಹೆಸರುಗಳನ್ನು ತೆಗೆದುಹಾಕುವುದನ್ನು ತಡೆಯಲು ಆಯೋಗವು ಬಿಗಿ ನಿಯಮಗಳನ್ನು ರೂಪಿಸಿದೆ. ಒಬ್ಬ ವ್ಯಕ್ತಿ ಸಲ್ಲಿಸಬಹುದಾದ ಫಾಮ್ರ್-7 ಅರ್ಜಿಗಳಿಗೆ ಮಿತಿ ಹೇರಲಾಗಿದ್ದು, ಮತಗಟ್ಟೆಯೊಂದರಲ್ಲಿ ಶೇ. 2ಕ್ಕಿಂತ ಹೆಚ್ಚು ಹೆಸರುಗಳನ್ನು ತೆಗೆದುಹಾಕುವ ಪ್ರಸ್ತಾವನೆ ಬಂದರೆ ಅಥವಾ ಒಬ್ಬರೇ ವ್ಯಕ್ತಿ 5ಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದರೆ, ಮತದಾರರ ನೋಂದಣಾಧಿಕಾರಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಮೃತಪಟ್ಟವರ ಹೆಸರನ್ನು ತೆಗೆದುಹಾಕುವ ಮುನ್ನ ಸ್ಥಳೀಯ ಸಂಸ್ಥೆಗಳ ಜನನ-ಮರಣ ನೋಂದಣಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಬಿಎಲ್ಒ ಕ್ಷೇತ್ರ ಪರಿಶೀಲನಾ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಭಾವಿ ಮತದಾರರಿಂದಲೂ ಮುಂಗಡ ಅರ್ಜಿ ಸ್ವೀಕರಿಸಲು ಅವಕಾಶ
ಮಹಿಳೆ, ಹಿರಿಯ ನಾಗರಿಕರು, ನಿರಾಶ್ರಿತರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಶಿಬಿರ
ಮತದಾರರು ಮತಗಟ್ಟೆ ತಲುಪಲು 2 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸದಂತೆ ಕ್ರಮ
ವಸತಿ ಸಮುಚ್ಚಯ, ಕೊಳೆಗೇರಿ ಪ್ರದೇಶ ಗಳಲ್ಲಿ ಹೊಸ ಮತಗಟ್ಟೆ ಸ್ಥಾಪಿಸಲು ಸಮೀಕ್ಷೆ
ಒಂದೇ ಮನೆಯಲ್ಲಿ ವಾಸಿಸುವ ಕುಟುಂಬದ ಎಲ್ಲಾ ಸದಸ್ಯರ ಹೆಸರು ಒಂದೇ ಕಡೆ ಇರಲು ಕ್ರಮ
1. ಶಾಶ್ವತ ಸ್ಥಳಾಂತರ ಕಾರಣಕ್ಕೆ ಎಸ್ಐಆರ್ ವೇಳೆ ಮತದಾರರ ಪಟ್ಟಿಗೆ ಸೇರಲು ಸಾಧ್ಯವಾಗ ದವರು ಅರ್ಜಿ ಸಲ್ಲಿಸಬಹುದು.
2. ಎಸ್ಐಆರ್ ವೇಳೆ ಎನ್ಯುಮರೇಷನ್ ನಮೂನೆ ಭರ್ತಿ ಮಾಡಿ ಕೊಡದೇ ದೂರ ಉಳಿದವರಿಗೂ ಅವಕಾಶ ಇದೆ.
3. ಹೊಸ ಮತದಾರರು, ಅಥವಾ ಅರ್ಜಿ ಎಸ್ಐಆರ್ ವೇಳೆ ಅರ್ಜಿ ತಿರಸ್ಕೃತ ಗೊಂಡವರು ಪುನಃ ಅರ್ಜಿ ಸಲ್ಲಿಸಬಹುದು.