ಸಾಂದರ್ಭಿಕ ಚಿತ್ರ 
ರಾಜ್ಯ

ಗೃಹಲಕ್ಷ್ಮಿಗೆ ಇನ್ನು ಬಯೋಮೆಟ್ರಿಕ್: ಯೋಜನೆಯ ಸಮಗ್ರ ಮರು ಪರಿಶೀಲನೆಗೆ ಮುಂದಾದ ಸರ್ಕಾರ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಸೌಲಭ್ಯವು ಫಲಾನá-ಭವಿಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬಯೋಮೆಟ್ರಿಕ್ ಹಾಗೂ ಫೇಸ್ ಅಥೆಂಟಿಕೇಶನ್ ಮೂಲಕ ಸಮಗ್ರ ಮರುಪರಿಶೀಲನೆ ನಡೆಸಲು ಆದೇಶ ಹೊರಡಿಸಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಯೋಜನೆಯಡಿ 2023ರ ಆಗಸ್ಟ್ ನಿಂದ ಇದುವರೆಗೆ 1.24 ಕೋಟಿ ಫಲಾನುಭವಿಗಳಿಗೆ 32 ಕಂತುಗಳಲ್ಲಿ ಒಟ್ಟು 76,951.13 ಕೋಟಿ ಧನಸಹಾಯ ವಿತರಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೆಲ ಫಲಾನುಭವಿಗಳು ಮೃತಪಟ್ಟಿರುವುದು, ವಲಸೆ ಹೋಗಿರುವುದು ಹಾಗೂ ಫಲಾನುಭವಿಗಳು ಅಥವಾ ಅವರ ಪತಿ ಆದಾಯ ತೆರಿಗೆ ಮತ್ತು ಜಿಎಸ್​ಟಿ ವ್ಯಾಪ್ತಿಗೆ ಬಂದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. 

ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ಮಾತ್ರ ಸೌಲಭ್ಯ ಮುಂದುವರಿಸಲು ಸುಮಾರು 20 ಕೋಟಿ ವೆಚ್ಚದಲ್ಲಿ ಮರುಪರಿಶೀಲನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಆ.30ರಿಂದ ಒಂದು ತಿಂಗಳ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಸಿಬ್ಬಂದಿ ಹಾಗೂ ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್​ಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ನೇಮಿಸಲಾಗುತ್ತದೆ. ಪರಿಶೀಲನೆ ವೇಳೆ ಫಲಾನುಭವಿಗಳಿಂದ ಅರ್ಜಿ ನಮೂನೆ ಭರ್ತಿ ಮಾಡಿಸಿಕೊಳ್ಳುವುದರ ಜೊತೆಗೆ ಮೊಬೈಲ್ ಆಪ್ ಮೂಲಕ ಫೋಟೋ, ಜಿಪಿಎಸ್ ಸ್ಥಳ ಮಾಹಿತಿ, ಮತದಾರರ ಗುರುತಿನ ಚೀಟಿ ವಿವರ ಹಾಗೂ ಸ್ಥಳದಲ್ಲೇ ಫೇಸ್ ಅಥೆಂಟಿಕೇಶನ್ ದಾಖಲಿಸಲಾಗುತ್ತದೆ. ಮುಖ ದೃಢೀಕರಣ ಸಾಧ್ಯವಾಗದಿದ್ದರೆ ಸಮೀಪದ ನ್ಯಾಯಬೆಲೆ ಅಂಗಡಿ ಅಥವಾ ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಪರಿಶೀಲನೆಗೆ 

ಅವಕಾಶ ಕಲ್ಪಿಸಲಾಗಿದೆ. ಜುಲೈ 1, 2026ರ ನಂತರ ನ್ಯಾಯಬೆಲೆ ಅಂಗಡಿಗಳಲ್ಲಿ ದಾಖಲಾಗಿರುವ ಬಯೋಮೆಟ್ರಿಕ್ ಮಾಹಿತಿಯನ್ನೂ ಪರಿಶೀಲನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಗೂಳಿಗೌಡ ತಿಳಿಸಿದ್ದಾರೆ.

ವಿಧಾನಸೌಧಕ್ಕೆ ಗುಲಾಬಿ ಬಣ್ಣದ ಮೆರುಗು

ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷಿ್ಮ ಯೋಜನೆ ಜಾರಿಗೊಂಡು ಆ.30ಕ್ಕೆ ಮೂರು ವರ್ಷ ಪೂರ್ಣಗೊಳ್ಳಲಿದ್ದು, ಈ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ ಸಂಜೆ 6ರಿಂದ ರಾತ್ರಿ 10ರವರೆಗೆ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ. ಸದರಿ ಯೋಜನೆ ಅಡಿ 1.20 ಕೋಟಿ ಫಲಾನುಭವಿಗಳ ಖಾತೆಗೆ 76,500 ಕೋಟಿ ರೂ.ಗೂ ಹೆಚ್ಚು ಹಣ ಪಾವತಿಸಲಾಗಿದೆ.