- ಇಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ
ಬೆಂಗಳೂರು: ಸಮಾಜಕ್ಕೆ ಮತ್ತು ಯುವಪೀಳಿಗೆಗೆ ಭೀಕರ ಹಾನಿಯುಂಟು ಮಾಡುತ್ತಿರುವ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಉದಾರತೆ ತೋರುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಪ್ರಮುಖ ಆರೋಪಿಗಳಾದ ದೆಹಲಿ ಮೂಲದ ಜಾಸ್ಲೀನ್ ಕೌರ್ ಮತ್ತು ಗುರುಪ್ರೀತ್ ಕೌರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಬೆಂಗಳೂರಿನಿಂದ ದೆಹಲಿಗೆ ತೆರಳುವ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಬಂಧಿಸಿದೆ.
ತನ್ನಿಂದ ಯಾವುದೇ ಮಾದಕ ವಸ್ತುಗಳನ್ನು ನೇರವಾಗಿ ಜಪ್ತಿ ಮಾಡಿಲ್ಲ. ಕೇವಲ ಇತರ ಆರೋಪಿಗಳ ಹೇಳಿಕೆ ಆಧರಿಸಿ ಬಂಧಿಸಲಾಗಿದೆ ಎಂದು ಗುರುಪ್ರೀತ್ ವಾದಿಸಿದ್ದರೆ, ತಾನು ಯಾವುದೇ ಅಪರಾದ ಹಿನ್ನೆಲೆ ಇಲ್ಲದ ಯುವತಿಯಾಗಿದ್ದು, ತನ್ನ ಸಂಬಂಧಿ ತೇಜಿಂದರ್ ಸಿಂಗ್ ಎಂಬಾತ ಮಾದಕ ವಸ್ತು ಸಾಗಿಸುತ್ತಿದ್ದಾನೆ ಎಂಬ ಅರಿವಿಲ್ಲದೆ ಅವನ ಜತೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದೆ ಎಂದು ಜಾಸ್ಲೀನ್ ಕೌರ್ ವಾದಿಸಿದ್ದಳು. ಆದರೆ, ಈ ವಾದಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಡಿಆರ್ಐ ಅಧಿಕಾರಿಗಳು ಇಬ್ಬರೂ ವ್ಯವಸ್ಥಿತ ಜಾಲದ ಭಾಗವಾಗಿದ್ದಾರೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳನ್ನು ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ಪರಿಗಣಿಸಿದೆ.
ಬ್ಯಾಂಕಾಕ್ನಿಂದ ಪೂರೈಕೆ:
ದುಬೈನಲ್ಲಿ ನೆಲೆಸಿರುವ ಹರ್ಪ್ರೀತ್ ಸಿಂಗ್ ಎಂಬಾತ ಬ್ಯಾಂಕಾಕ್ ಮತ್ತಿತರ ದೇಶಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಭಾರತಕ್ಕೆ ಸಾಗಿಸುತ್ತಿದ್ದ. ಆತನ ಸಹೋದರನಾದ ಗುರುಪ್ರೀತ್ ಸಿಂಗ್ ಭಾರತದಲ್ಲಿ ಹಣಕಾಸಿನ ವ್ಯವಹಾರ ಮತ್ತು ಸಾಗಾಟದ ಹೊಣೆ ಹೊತ್ತುಕೊಂಡಿದ್ದ. ಈ ವಹಿವಾಟುಗಳಿಗೆ ಹವಾಲಾ ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕ ಪಾವತಿ ಮಾಡಲಾಗುತ್ತಿತ್ತು ಎಂಬುದು ಡಿಆರ್ಐ ಪತ್ತೆ ಮಾಡಿತ್ತು. ದೆಹಲಿಯಲ್ಲಿರುವ ಗುರುಪ್ರೀತ್ ಸಿಂಗ್ ಮನೆ ಮೇಲೆ ಡಿಆರ್ಐ ಅಧಿಕಾರಿಗಳು ದಾಳಿ ನಡೆಸಿದಾಗ 1.2 ಕೋಟಿ ರೂಪಾಯಿ ನಗದು ಮತ್ತು ಹಲವು ದೇಶಗಳ ವಿದೇಶಿ ಕರೆನ್ಸಿಗಳು ಪತ್ತೆಯಾಗಿತ್ತು.
ℹ️ ವಿವಿಧ ರಾಜ್ಯಗಳಲ್ಲಿ ಜಾಲ ವಿಸ್ತರಣೆ
2025ರ ಆ. 20ರಂದು ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ದೆಹಲಿಗೆ ಹೊರಡಬೇಕಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಇಬ್ಬರು ಶಂಕಿತರು ಡ್ರಗ್ಸ್ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಡಿಆರ್ಐಗೆ ಲಭಿಸಿತ್ತು. ದಾಳಿ ನಡೆಸಿದ್ದ ಅಧಿಕಾರಿಗಳು ತೇಜಿಂದರ್ ಸಿಂಗ್ ಮತ್ತು ಜಾಸ್ಲೀನ್ ಕೌರ್ ಅವರನ್ನು ತಡೆದು ಪರಿಶೀಲಿಸಿದಾಗ ಅವರ ಬಳಿ ಇದ್ದ 3 ಟ್ರಾಲಿ ಬ್ಯಾಗ್ಗಳಲ್ಲಿ ಒಟ್ಟು 29 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿತ್ತು. ಬಂಧಿತರ ಹೇಳಿಕೆ ಆಧರಿಸಿ ಬೆಂಗಳೂರಿನ ಹೋಟೆಲ್ ಮತ್ತು ಮಧ್ಯಪ್ರದೇಶದಲ್ಲಿ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 38 ಕೆ.ಜಿ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.