ಕೇರಳದ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಎ.ಎ. ರಹೀಮ್  
ರಾಜ್ಯ

ನನಗೆ ಹೆಮ್ಮೆ ಇದೆ... ಇಂಗ್ಲಿಷ್​ ಮಾತನಾಡಿದ್ದನ್ನು ಟ್ರೋಲ್​ ಮಾಡಿದವರಿಗೆ ಸಂಸದ ರಹೀಮ್ ಕೊಟ್ಟ ಉತ್ತರವಿದು! AA Rahim

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಬಟ್ಲರ್​ ಇಂಗ್ಲಿಷ್​ ಮಾತನಾಡಿದ್ದಕ್ಕೆ ಕೇರಳದ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಎ.ಎ. ರಹೀಮ್ ಟ್ರೋಲ್
  • ಟ್ರೋಲ್​ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದ ಕೂಡಲೇ ಪ್ರತಿಕ್ರಿಯೆ ನೀಡಿದ ರಹೀಮ್​
  • ನಾನು ನನ್ನ ಭಾಷೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುತ್ತೇನೆ ಎಂದ ರಹೀಮ್
  • ಜಗತ್ತು ಗಮನಿಸದೇ ಹೋಗುತ್ತಿದ್ದ ದೃಶ್ಯಗಳನ್ನು ಟ್ರೋಲ್​ನಿಂದಾದರೂ ನೋಡುವಂತಾಗಿದೆ ಅಂದ್ರು ಕೇರಳ ಸಂಸದ
ತಿರುವನಂತಪುರಂ: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಕೇರಳದ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಎ.ಎ. ರಹೀಮ್ ( AA Rahim ) ಅವರು ಬಟ್ಲರ್​ ಇಂಗ್ಲಿಷ್​ ಮಾತನಾಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಂತೆ ಸ್ವತಃ ರಹೀಮ್​ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ ಒತ್ತುವರಿ ತೆರವು ವಿವಾದದಲ್ಲಿ ಕೇರಳ ನಾಯಕರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕೂಡ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದಾರೆ. ಆದರೆ, ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡ ಕಾರಣ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ.
ನೆಲಸಮ ಆದ ಜಾಗದಲ್ಲಿ ಕೇರಳ ಮಂದಿಯೇ ಹೆಚ್ಚಿರುವ ಕಾರಣ ಅಲ್ಲಿನ ಜನರನ್ನು ಭೇಟಿ ಮಾಡಲು ಕೇರಳದ ನಾಯಕರು ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಅದೇ ರೀತಿ ಸಂಸದ ಎ.ಎ. ರಹೀಮ್ ಕೂಡ ಇತ್ತೀಚಗೆ ಕೋಗಿಲು ಲೇಔಟ್​ಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿದ್ದರು. ಬಳಿಕ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಬಟ್ಲರ್​ ಇಂಗ್ಲಿಷ್​ನಲ್ಲಿ ಮಾತನಾಡಿದ್ದದ್ದರು. ಅವರು ಮಾತನಾಡಿದ ಇಂಗ್ಲಿಷ್​ ಯಾರಿಗೂ ಕೊಂಚವೂ ಅರ್ಥವಾಗಲಿಲ್ಲ. ಅವರು ಇಂಗ್ಲಿಷ್​ ಮಾತನಾಡಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದೆ.
ಟ್ರೋಲ್​ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದ ಕೂಡಲೇ ರಹೀಮ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಟ್ರೋಲ್ ಮಾಡುವವರನ್ನು ನಾನು ದ್ವೇಷಿಸುವುದಿಲ್ಲ. ಅದರ ಬದಲಾಗಿ ನಾನು ನನ್ನ ಭಾಷೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುತ್ತೇನೆ ಎಂದು ರಹೀಮ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ನನಗೆ ಕೆಲವು ಭಾಷಾ ಮಿತಿಗಳಿವೆ ಆದರೆ, ಮಾನವ ದುಃಖಗಳಿಗೆ ಇರುವುದು ಒಂದೇ ಒಂದು ಭಾಷೆ ಎಂಬುದು ನನ್ನ ಅಭಿಪ್ರಾಯ. ನನ್ನ ಇಂಗ್ಲಿಷ್ ಅನ್ನು ಟ್ರೋಲ್ ಮಾಡುವವರಿಗೆ ನಾನು ಹೇಳುವುದೇನೆಂದರೆ, ರಾಜ್ಯ ಸರ್ಕಾರವೊಂದು ನಡೆಸಿದ ಭೀಕರತೆಯನ್ನು ನೇರವಾಗಿ ನೋಡಲು ನಾವು ಅಲ್ಲಿಗೆ ಹೋಗಿದ್ದೆವು. ಅಲ್ಲಿ ಸಾವಿರಾರು ದುರ್ಬಲ ಸಂತ್ರಸ್ತರನ್ನು ನಾವು ಕಣ್ಣಾರೆ ನೋಡಿದ್ದೇವೆ. ಅವರೆಲ್ಲರು ಧ್ವನಿರಹಿತರು ಮತ್ತು ನಿರ್ಗತಿಕರು. ನಾನು ಅವರ ಪರವಾಗಿ ನಿಂತಿದ್ದರ ಬಗ್ಗೆ ನನಗೆ ಇನ್ನೂ ಹೆಮ್ಮೆ ಇದೆ. ಇಂದು, ಜಗತ್ತು ಗಮನಿಸದೇ ಹೋಗುತ್ತಿದ್ದ ದೃಶ್ಯಗಳನ್ನು ಟ್ರೋಲ್​ನಿಂದಾದರೂ ನೋಡುವಂತಾಗಿದೆ ಎಂದಿದ್ದಾರೆ.
ನಿಮ್ಮಲ್ಲಿ ಯಾವುದೇ ತಪ್ಪುಗಳಿಲ್ಲದೆ ವಿವಿಧ ಭಾಷೆಗಳನ್ನು ನಿಭಾಯಿಸಬಲ್ಲ ಅನೇಕರಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ, ಅವರಲ್ಲಿ ಯಾರೊಬ್ಬರನ್ನು ನಾನು ಆ ಸ್ಥಳದಲ್ಲಿ ನೋಡಲಿಲ್ಲ. ಬುಲ್ಡೋಜರ್‌ಗಳಿಂದ ಜೀವನವೇ ನಾಶವಾದ ದುರ್ಬಲರ ಹತ್ತಿರ ಯಾರೂ ಇಲ್ಲ. ನೀವು ನನ್ನ ಭಾಷೆಯನ್ನು ಸೂಕ್ಷ್ಮವಾಗಿ ಗಮನಿಸಿರುವಾಗ, ನಿಮ್ಮ ಸರ್ಕಾರ ಕಳುಹಿಸಿದ ಬುಲ್ಡೋಜರ್‌ಗಳಿಂದ ನಾಶವಾದ ಮನೆಗಳನ್ನು ಮತ್ತು ಅವುಗಳಲ್ಲಿರುವ ಕೆಲವು ಬಡ ಭಾರತೀಯರನ್ನು ನೀವೂ ಗಮನಿಸಬೇಕು ಎಂದು ಹೇಳುವ ಮೂಲಕ ರಹೀಮ್​ ಅವರು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ, (ಏಜೆನ್ಸೀಸ್​).