- ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಜಾಹಿರಾತು ಪ್ರಕರಣ
ಬೆಂಗಳೂರು: ನಿಕಟಪೂರ್ವ (2023) ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಸರಣಿ ಆರೋಪಗಳನ್ನು ಮಾಡಿ ಪತ್ರಿಕೆಗಳಿಗೆ ಜಾಹೀರಾತು ನೀಡಿರುವುದಕ್ಕೆ ಸಂಬಂಧಿಸಿ ಬಿಜೆಪಿ ದಾಖಲಿಸಿರುವ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷಿ ಇಲ್ಲ ಎಂದು ರಾಹುಲ್ ಪರ ವಕೀಲರು ಹೈಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿದ್ದಾರೆ.
ಪ್ರಕರಣ ರದ್ದುಕೋರಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷಿಗಳನ್ನು ಒದಗಿಸಿಲ್ಲ. ಅವರನ್ನು ಕೆಪಿಸಿಸಿ ನೀಡಿರುವ ಜಾಹಿರಾತಿಗೆ ಜವಾಬ್ದಾರಿ ಮಾಡಲು ಸಾಧ್ಯವಿಲ್ಲ. ಜಾಹಿರಾತು ನೀಡುವ ಸಂದರ್ಭದಲ್ಲಿ ರಾಹುಲ್ ಕಾಂಗ್ರೆಸ್ ಪಕ್ಷದ ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ಜಾಹಿರಾತನ್ನು ಸರ್ಕಾರದ ವಿರುದ್ಧ ನೀಡಲಾಗಿತ್ತೆ ಹೊರತು ಬಿಜೆಪಿ ಪಕ್ಷದ ವಿರುದ್ಧವಲ್ಲ. ಆದ್ದರಿಂದ ಪಕ್ಷಕ್ಕೆ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ದೋಷಪೂರಿತವಾಗಿದೆ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಪರ ವಕೀಲ ಎಂ. ವಿನೋದ್ ಕುಮಾರ್, 2019ರಿಂದ ಆಡಳಿತ ನಡೆಸಿರುವುದು ಬಿಜೆಪಿ ಪಕ್ಷವಾಗಿದೆ. ಆದ್ದರಿಂದ ಜಾಹಿರಾತಿನಲ್ಲಿದ್ದ ಆರೋಪಗಳು ಬಿಜೆಪಿಯ ವಿರುದ್ಧವೇ ಇದೆ. ಆ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಚುನಾವಣೆಯಲ್ಲಿ ನಷ್ಟವಾಗಿತ್ತು. ಆದ್ದರಿಂದ ದೂರು ನೀಡಲು ಬಿಜೆಪಿಗೆ ಅವಕಾಶವಿದೆ ಎಂದು ವಾದಿಸಿದರು.
ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಜಾಹಿರಾತು ನೀಡುವ ಸಮಯದಲ್ಲಿ ರಾಹುಲ್ ಗಾಂಧಿಗೆ ಯಾವುದೇ ಜವಾಬ್ದಾರಿಯಲ್ಲಿ ಇರಲಿಲ್ಲ ಎಂಬ ಬಗ್ಗೆ ಮೆಮೊ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು. ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ಮುಂದುವರಿದಿದೆ.