"No drugs bro..' Stay healthy." 
ರಾಜ್ಯ

"ಡ್ರಗ್ಸ್​ ಬೇಡ ಬ್ರೋ..' ಆರೋಗ್ಯವಾಗಿರು

ನೆಲಮಂಗಲ: ವ್ಯಸನಮುಕ್ತ, ಸ್ವಸ್ಥ್ಯ ಸಮಾಜ ನಿರ್ಮಿಸುವಲ್ಲಿ ಯುವಕರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಪೊಲೀಸ್​ ಇಲಾಖೆ, ನೆಲಮಂಗಲ ಉಪ ವಿಭಾಗದಿಂದ ಮಾದಕವಸ್ತು ತಡೆ ಜಾಗೃತಿಗಾಗಿ ಆಯೋಜಿಸಿದ್ದ "ಡ್ರಗ್ಸ್​ ಬೇಡ ಬ್ರೋ' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರು ಡ್ರಗ್ಸ್​ಗಳಿಂದ ದೂರವಿರಬೇಕು. ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳಬೇಕು. ವ್ಯಸನಮುಕ್ತ, ಸುರಕ್ಷಿತ ಹಾಗೂ ಸದೃಢ ಸಮಾಜ ನಿಮಾರ್ಣಕ್ಕೆ ರಾಜ್ಯ ಸರ್ಕಾರ ವಿಶೇಷ ಅಭಿಯಾನ ಕೈಗೊಂಡಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ದೇವಾಲಯದಂತೆ ಕಾಪಾಡಬೇಕಾದ ದೇಹವನ್ನು ನಾಶಮಾಡುವ ದುಶ್ಚಟಗಳಿಂದ ಎಲ್ಲರೂ ದೂರವಿರಬೇಕು. ಸದ್ಗುಣಗಳು ನಮ್ಮನ್ನು ದೇಶದ ಸತಜೆಗಳನ್ನಾಗಿ ರೂಪಿಸುತ್ತವೆ. ಹಾಗಾಗಿ ಗುಟ್ಖಾ, ಸಿಗರೇಟ್​, ಬಿಡಿ, ತಂಬಾಕು, ಮಾದಕ ವಸ್ತುಗಳನ್ನು ಸೇವಿಸಬಾರದು ಎಂದರು.
ಯುವಕರು ದೇಶದ ಆಸ್ತಿ. ಇಂತಹ ಆಸ್ತಿ ವ್ಯಸನಗಳಿಂದ ನಷ್ಟವಾಗುತ್ತಿದೆ. ವ್ಯಸನದಿಂದ ಹೊರಬರಲು ಶಿಕ್ಷಣ, ಕ್ರೀಡೆ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
ಡಿವೈಎಸ್​ಪಿ ಉಮಾರಾಣಿ ಮಾತನಾಡಿ, ಶಾಲಾ&ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು "ಡ್ರಗ್ಸ್​ ಬೇಡ ಬ್ರೋ' ಅಭಿಯಾನ ರೂಪಿಸಲಾಗಿದೆ. ವ್ಯಸನಮುಕ್ತ ಕರ್ನಾಟಕ ಮಾಡಬೇಕು ಎಂಬುದು ಪೊಲೀಸ್​ ಇಲಾಖೆ ಗುರಿ.
ಜನಸ್ನೇಹಿ ಮತ್ತು ಯುವ ಸ್ನೇಹಿಯಾಗಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಶೈಕ್ಷಣಿಕ ಸಂಸ್ಥೆ ಮತ್ತು ಸಮಾಜದ ಜವಾಬ್ದಾರಿ ಎಂದರು.
ನರೇಂದ್ರಬಾಬು, ಮೋಹನ್​ಕುಮಾರ್​, ಧಮೇಂರ್ದ್ರ, ಚನ್ನೇಗೌಡ, ಪಿಎಸ್​ಐ ನಂಜಯ್ಯ, ನಾಗರಾಜು, ಪ್ರಭುಲಿಂಗರೆಡ್ಡಿ, ಎಎಸ್​ಐ ಬಿ.ಎಸ್​.ರಘು, ವೆಂಕಟೇಶಯ್ಯ, ಸಿಬ್ಬಂದಿ ಬಸವರಾಜು, ಚಂದ್ರ, ಕೇಶವ್​ಮೂರ್ತಿ, ಫಠಾಣ್​, ಮೋಹನ್​, ಗಣೇಶ್​, ವಂಸತ್​ ಇದ್ದರು.