- ಅಪಘಾತ ವಿಮೆ ಕೋರಿದ್ದ ತಂದೆಯ ಮೇಲ್ಮನವಿ ವಜಾ
- ಮಠ ಮಾತ್ರ ಕಾನೂನುಬದ್ಧ ವಾರಸುದಾರ ಎಂದು ಹೈಕೋರ್ಟ್ ಸ್ಪಷ್ಟನೆ
ಲೌಕಿಕ ಜೀವನ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಹಾಗೂ ಮಠಾಧೀಶರಾಗಿರುವ ವ್ಯಕ್ತಿಯು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಅವರ ಪೂರ್ವಾಶ್ರಮದ ಪಾಲಕರು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕಾನೂನುಬದ್ಧ ವಾರಸುದಾರ ಎಂಬ ಆಧಾರದಲ್ಲಿ ಪರಿಹಾರ ಕೋರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಒಬ್ಬ ವ್ಯಕ್ತಿಯು ಸಂಸಾರಿಕ ಜೀವನ ತೊರೆದು ಸನ್ಯಾಸಿ ಅಥವಾ ಪೀಠಾಧಿಪತಿಯಾದಾಗ, ಅವರು ತಮ್ಮ ಕುಟುಂಬದೊಂದಿಗಿನ ಎಲ್ಲ ರೀತಿಯ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತಾರೆ. ಆದ್ದರಿಂ, ಅವರು ಅಪಘಾತದಲ್ಲಿ ಮೃತಪಟ್ಟರೆ ಅವಲಂಬನೆಯ ಆಧಾರದಲ್ಲಿ ಪರಿಹಾರ ಕೋರಲು ಜೈವಿಕ ತಂದೆಗೆ ಹಕ್ಕಿಲ್ಲ ಎಂದು ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಆದರೆ, ಸನ್ಯಾಸಿಯು ಮಠದ ಅಗತ್ಯಗಳಿಗೆ ಅನುಸಾರ ತಮ್ಮ ಸೇವೆ ಸಲ್ಲಿಸುತ್ತಾರೆ ಮತ್ತು ಅದರ ಆಡಳಿತಾತ್ಮಕ ಕರ್ತವ್ಯಗಳ ಜವಾಬ್ದಾರಿ ಹೊಂದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಶ್ರಮ ಮತ್ತು ಸೇವೆಯನ್ನು ಪಡೆಯುತ್ತಿದ್ದ ಧಾರ್ಮಿಕ ಸಂಸ್ಥೆಯು (ಮಠ) ಅವರ ಕಾನೂನು ಪ್ರತಿನಿಧಿ ಸ್ಥಾನದಲ್ಲಿ ನಿಲ್ಲುತ್ತದೆ ಮತ್ತು ಸನ್ಯಾಸಿ ಅಪಘಾತದಲ್ಲಿ ಮೃತಪಟ್ಟರೆ ಪರಿಹಾರವನ್ನು ಪಡೆಯಲು ಅರ್ಹವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರದ ಮಠವೊಂದರ ಪೀಠಾಧಿಪತಿಯಾಗಿದ್ದ ಪಿರಯೋಗಿ ಗುಲ್ಷನ್ನಾಥ್ ಗುರುಪೀರ್ ಹರಿನಾಥಜೀ ಮಹಾರಾಜ್ ಅವರು 2009ರ ಡಿ. 12ರಂದು ನಡೆದಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ತಮ್ಮ ಬೈಕ್ನಲ್ಲಿ ತೆರಳುತ್ತಿದ್ದಾಗ ಗಂಗಾವಳಿ ಗ್ರಾಮದ ಬಳಿ ಎದುರುಬಂದ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ನಂತರ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದ ಮೃತರ ಪೂರ್ವಾಶ್ರಮದ ತಂದೆಯು ಪರಿಹಾರ ಕೋರಿದ್ದರು.
ವಿಮಾ ಕಂಪನಿಯ ವಿರೋಧ:
ತಂದೆಯ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದ ವಿಮಾ ಕಂಪನಿ, ಅರ್ಜಿದಾರರು ಮೃತ ಸ್ವಾಮೀಜಿಯನ್ನು ಆರ್ಥಿಕವಾಗಿ ಅವಲಂಬಿಸಿರಲಿಲ್ಲ. ಅವರು ಅಪಘಾತ ಸಂಭವಿಸುವುದಕ್ಕಿಂತ ಬಹಳ ಹಿಂದೆಯೇ ಸಾಂಸಾರಿಕ ಜೀವನ ತ್ಯಜಿಸಿ ಸಾಧುವಾಗಿ ಜೀವನ ಸಾಗಿಸುತ್ತಿದ್ದರು. ತಂದೆ, ತಾಯಿಯಿಂದ ಸಂಬಂಧ ಕಳಚಿಕೊಂಡು ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದರು. ಆದ್ದರಿಂದ ಪೂರ್ವಾಶ್ರಮದ ತಂದೆ ಎಂಬ ಕಾರಣಕ್ಕೆ ಅಪಘಾತ ಪರಿಹಾರ ಕೋರಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಆದ್ದರಿಂದ ತಂದೆಯ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದ ನ್ಯಾಯಾಧಿಕರಣ ಆಸ್ತಿ ನಷ್ಟ ಎಂಬ ಕಾರಣಕ್ಕೆ 50 ಸಾವಿರ ರೂಪಾಯಿ ಪರಿಹಾರ ನಿಗದಿಪಡಿಸಿ, ಅವಲಂಬವನೆಯ ಆಧಾರದಲ್ಲಿ ಕೋರಿದ್ದ ಪರಿಹಾರವನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಹೈಕೋರ್ಟ್ನಲ್ಲಿ ತಂದೆ ಪ್ರಶ್ನಿಸಿದ್ದರು.
ಮೃತನ ಆಸ್ತಿಯನ್ನು ಪ್ರತಿನಿಧಿಸುವ ವ್ಯಕ್ತಿತಯನ್ನು ಕಾನೂನು ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಈ ಪ್ರಕರಣದಲ್ಲಿ ಮೃತರು ಸನ್ಯಾಸ ಸ್ವೀಕರಿಸಿ ಸಾಂಸಾರಿಕ ಬಂಧವನ್ನು ಕಳಚಿಕೊಂಡಿದ್ದಾರೆ. ಅವರು ಸೇವೆ ಸಲ್ಲಿಸುತ್ತಿದ್ದ ಮಠವು ಕಾನೂನು ಪ್ರತಿನಿಧಿಯಾಗಿದೆ. ಒಂದು ವೇಳೆ ಈ ಪರಿಹಾರದ ಅರ್ಜಿಯನ್ನು ಮಠದ ಆಢಳಿತಾಧಿಕಾರಿ ಸಲ್ಲಿಸಿದ್ದರೆ ಅದು ಮಾನ್ಯವಾಗುತ್ತಿತ್ತು. ಪೂರ್ವಾಶ್ರಮದ ತಂದೆಗೆ ಯಾವುದೇ ಅವಕಾಶವಿಲ್ಲ. ಆದರೂ, ಆಸ್ತಿ ನಷ್ಟ ಎಂಬ ಕಾರಣಕ್ಕೆ ನ್ಯಾಯಾಧಿಕರಣ ನೀಡಿರುವ 50 ಸಾವಿರ ರೂ. ಪರಿಹಾರವನ್ನು ಪ್ರತಿವಾದಿಗಳು ಪ್ರಶ್ನಿಸದ ಕಾರಣ ಅದನ್ನು ಎತ್ತಿಹಿಡಿಯಲಾಗಿದೆ ಎಂದು ಹೇಳಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ ಹೇಳಿದೆ.