- ಅರ್ಜಿ ವಜಾಗೊಳಿಸಿದ ಹೈಕೋರ್ಟ್
- ಬೈರತಿ ಸುರೇಶ್ ದಾಖಲಿಸಿರುವ ಮಾನಹಾನಿ ಕೇಸ್
ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ದಾಖಲಿಸಿರುವ 50 ಕೋಟಿ ರೂಪಾಯಿ ಮೊತ್ತದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಮಾಜಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಈ ಆದೇಶ ನೀಡಿದೆ.
ಸಚಿವ ಬೈರತಿ ಸುರೇಶ್ ಪರ ವಾದಿಸಿದ ವಕೀಲರು, ವಿಶ್ವನಾಥ್ ಅವರು ಸುಳ್ಳು ಆರೋಪಗಳನ್ನು ಹೊರಿಸಿ ಮಾನಹಾನಿ ಮಾಡಿದ್ದಾರೆ. ಆದ್ದರಿಂದ ಪ್ರಕರಣ ದಾಖಲಿಸಲಾಗಿದೆ. ವಿಚಾರಣಾ ನ್ಯಾಯಾಲಯವು ಈಗಾಗಲೇ ಪ್ರಾಥಮಿಕ ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಅರ್ಜಿದಾರರು ವಿಚಾರಣೆ ಎದುರಿಸಿ ಖುಲಾಸೆಯಾಗಲಿ ಎಂದರು.
ಅರ್ಜಿದಾರರ ಪರ ವಾದಿಸಿದ ವಕೀಲರು, ಯಾವುದೇ ದುರುದ್ದೇಶವಿಲ್ಲದೆ ಹೇಳಿಕೆ ನೀಡಲಾಗಿದೆ. ಆ ರೀತಿಯ ಹೇಳಿಕೆಗಳು ಕ್ರಿಮಿನಲ್ ಮಾನಹಾನಿಯಾಗುವುದಿಲ್ಲ. ಸಂಧಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಆದರೆ, ಯಾವುದೇ ಸಂಧಾನ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ಬೈರತಿ ಸುರೇಶ್ ಪರ ವಕೀಲರು ಪ್ರತಿಕ್ರಿಯಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಸಾಾಧಾರಗಳನ್ನು ಪರಿಗಣಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ:
2024ರಲ್ಲಿ ಸಚಿವ ಬೈರತಿ ಸುರೇಶ್ ವಿರುದ್ಧ ಎಚ್.ವಿಶ್ವನಾಥ್ ಗಂಭೀರ ಆರೋಪಗಳನ್ನು ಮಾಡಿದ್ದರು. ಸುರೇಶ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಭೂ ಪರಿವರ್ತನೆಗೆ ಹಣ ನಿಗದಿಪಡಿಸಲಾಗಿದೆ ಮತ್ತು ಮುಡಾದ ಮಾಜಿ ಅಧಿಕಾರಿಗಳಾದ ನಟೇಶ್ ಹಾಗೂ ದಿನೇಶ್ ಜತೆ ಸೇರಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದರು. ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಹಾಗೂ ಆಧಾರರಹಿತವಾದ ಆರೋಪಗಳನ್ನು ಮಾಡಲಾಗಿದೆ ಎಂದು ಬೈರತಿ ಸುರೇಶ್ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.