ಸೌಕರ್ಯ ವಂಚಿತ ಕೋಥಳಿವಾಡಿ ಗ್ರಾಮ
- ಸೌಕರ್ಯ ವಂಚಿತ ಕೋಥಳಿವಾಡಿ ಗ್ರಾಮ
- ರಸ್ತೆ,ನೀರು,ಶಾಲೆ ಇಲ್ಲದೇ ಪರದಾಟ
- ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಾಮ
ಮೂಲಸೌಕರ್ಯ ವಂಚಿತ ಕೋಥಳಿವಾಡಿ
| ರಸ್ತೆ, ನೀರು, ಶೌಚಗೃಹ ಇಲ್ಲದೇ ಪರದಾಟ | ಶಿಕ್ಷಣದಿಂದ ಮಕ್ಕಳು ವಂಚಿತ
ಸ್ವಾತಂತ್ರ ಬಂದು ೭೯ ವರ್ಷ ಕಳೆದರೂ ತಾಲೂಕು ಕೇಂದ್ರದಿಂದ ಕೇವಲ ೧೨ ಕಿ.ಮೀ. ದೂರದಲ್ಲಿರುವ ಈ ಗ್ರಾಮದ ಜನರಿಗೆ ಇನ್ನೂ ಮೂಲ ಸೌಕರ್ಯಗಳೇ ದೊರೆತಿಲ್ಲ. ರಸ್ತೆ, ಸಾರಿಗೆ ಬಸ್, ಶುದ್ಧ ಕುಡಿಯುವ ನೀರು, ಸಿಸಿರಸ್ತೆ, ಶೌಚಗೃಹ ತಾಲೂಕಿನ ಕೋಥಳಿವಾಡಿ ಗ್ರಾಮದ ಜನರಿಗೆ ಮರೀಚಿಕೆಯಾಗಿವೆ.
ಕೋಥಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಗ್ರಾಮದ ಹೊರವಲಯದಲ್ಲಿ ೭೫ಕ್ಕೂ ಹೆಚ್ಚು ಕುಟುಂಬಗಳಲ್ಲಿ ೨೫೦ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಚಿಕ್ಕೋಡಿ-ನಿಪ್ಪಾಣಿ ರಾಜ್ಯ ಹೆದ್ದಾರಿಯಿಂದ 3 ಕಿ.ಮೀ. ದೂರದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಈ ಜನರ ಪರಿಸ್ಥಿತಿ ಹೇಳತೀರದು.
ಜನರಿಗೆ ಪಟ್ಟಣ ತಲುಪಬೇಕಾದರೆ ೩ ಕಿ.ಮೀ. ಕಚ್ಚಾ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಸಾಗಿ ಹಳ್ಳ ದಾಟಿ ಕೋಥಳಿ ಅಥವಾ ಹಂದ್ಯಾನವಾಡಿ ಗ್ರಾಮ ತಲುಪಬೇಕು. ಸುಸಜ್ಜಿತ ರಸ್ತೆ ಇಲ್ಲದ್ದರಿಂದ ಗ್ರಾಮಕ್ಕೆ ಸಾರಿಗೆ ಬಸ್ ಅಥವಾ ಖಾಸಗಿ ವಾಹನಗಳು ಬರುವುದಿಲ್ಲ.
ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, ಇಲ್ಲಿ 1-5 ನೇ ತರಗತಿ ಇದೆ. ನಂತರದ ಹಿರಿಯ ಪ್ರಾಥಮಿಕ ಹಾಗೂ ಚಿಕಿತ್ಸೆಶಾಲೆಗೆ ಹೋಗಬೇಕೆಂದರೆ ೩ ಕಿ.ಮೀ. ಕಾಲ್ನಡಿಗೆ ಮೂಲಕ ಕ್ರಮಿಸಿ ಶಾಲೆ ತಲುಪಬೇಕಿದೆ. ಹೀಗಾಗಿ, ಮಕ್ಕಳು ಕಿರಿಯ ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುತ್ತಿದ್ದಾರೆ. ಸಮರ್ಪಕ ರಸ್ತೆ, ಸಾರಿಗೆ ವ್ಯವಸ್ಥೆ ಇಲ್ಲದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುವವರಾಗಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಯಲುಶೌಚಮುಕ್ತ ಗ್ರಾಮಗಳನ್ನು ರೂಪಿಸಲು ಕೋಟ್ಯಂತರ ರೂ. ವ್ಯಯಿಸುತ್ತಿವೆ. ಆದರೆ, ಈ ಗ್ರಾಮದಲ್ಲಿ ಬಯಲುಶೌಚವೇ ಗತಿಯಾಗಿದೆ. ಗ್ರಾಮದ ಮನೆಗಳಲ್ಲಿ ವೈಯಕ್ತಿಕ ಶೌಚಗೃಹಗಳಿಲ್ಲ. ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಹೀಗಾಗಿ, ಮಕ್ಕಳು, ವೃದ್ಧರು, ಮಹಿಳೆಯರು ನಿತ್ಯವೂ ಪರದಾಡುವಂತಾಗಿದೆ. ಅದರಲ್ಲೂ ಮಳೆಗಾಲದಲ್ಲಂತೂ ಪಡಬಾರದ ಕಷ್ಟ ಪಡುತ್ತಿರುವುದು ಮುಜುಗರದ ಸಂಗತಿಯಾಗಿದೆ.
ನೀರಿನ ಟ್ಯಾಂಕ್ ಇದೆ, ನೀರಿಲ್ಲ:
ಗ್ರಾಮದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಟ್ಯಾಂಕಿಗೆ ನೀರು ತುಂಬಿಸಲು ಜಲಮೂಲವೇ ಇಲ್ಲ. ಪರಿಣಾಮ ಜನರು ಬಾವಿ, ಕೊಳವೆಬಾವಿಗಳನ್ನೇ ನೀರಿಗಾಗಿ ಅವಲಂಬಿಸಿದ್ದಾರೆ. ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಿಸಲಾಗಿದೆ.
ಯಾವುದೇ ಮೂಲ ಸೌಕರ್ಯಗಳಿಲ್ಲ. ಸಮರ್ಪಕ ರಸ್ತೆ, ಸಾರಿಗೆ, ಆರೋಗ್ಯ ಕೇಂದ್ರ, ಶಾಲೆ ಮೂಲಸೌಕರ್ಯಗಳು ಇಲ್ಲದೇ ಮಹಿಳೆಯರು, ವೃದ್ಧರು, ಮಕ್ಕಳು ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ಸಂಬಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಕೋಥಳಿವಾಡಿಯಲ್ಲಿ ಹೆಚ್ಚಿನ ಜನರು ಹೆಚ್ಚಾಗಿ ತೋಟಪಟ್ಟಿಗಳಲ್ಲಿ ವಾಸವಾಗಿದ್ದಾರೆ. ಗ್ರಾಮಕ್ಕೆ ರಸ್ತೆ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಖಾಸಗಿ ಜಮೀನು ಸಾರ್ವಜನಿಕ ಶೌಚಗೃಹ ನಿರ್ಮಿಸುವ ಸಮಸ್ಯೆಯಾಗಿದೆ, ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಲು ತಿಳಿಹೇಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.