ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ 
ರಾಜ್ಯ

ವಿದ್ರೋಹದ ಕಾರ್ಯಕ್ಕೆ ಪ್ರತಿಭೆ ಬಳಸಬಾರದು: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ-Nirmalanandanath Swamiji advises

ಬೆಂಗಳೂರು: ಮುಂದಿನ ದಶಕಗಳಲ್ಲಿ ಅಂತರಶಿಸ್ತೀಯ ಶಿಕ್ಷಣ ವ್ಯವಸ್ಥೆ ಬರಲಿದೆ. ಭವಿಷ್ಯ ಉಜ್ವಲವಾಗಿರಲಿದೆ. ವೈದ್ಯಕೀಯ ಶಿಕ್ಷಣ ಪಡೆದವರಿಗೆ ತಾಂತ್ರಿಕ ಶಿಕ್ಷಣದ ಅರಿವೂ ಇರಬೇಕಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್, ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಜಾನಪದ ಸಂಭ್ರಮ ಮತ್ತು ‘ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಅಶೀವರ್ಚನ ನೀಡಿದರು.
ಕೌಶಲಾಧಾರಿತ ಶಿಕ್ಷಣ ಪಡೆಯಬೇಕು. ಕೃತಕ ಬುದ್ಧಿಮತ್ತೆ ಸೇರಿ ಹೊಸ ಕಾಲದ ತಂತ್ರಜ್ಞಾನ ಸವಾಲನ್ನು ಒಡ್ಡಲಿದ್ದು, ಹೊಸ ಜ್ಞಾನಗಳ ಕಲಿಕೆಯತ್ತ ಆಸಕ್ತಿ ವಹಿಸಬೇಕು. ಕೌಶಲಾಧಾರಿತ ಶಿಕ್ಷಣವು ಮಕ್ಕಳಿಗೆ ಸಿಗಬೇಕು. ಕೃತಕ ಬುದ್ಧಿಮತ್ತೆ ಕಾಲದಲ್ಲಿ ಅಂಕಗಳಿಗಿಂತಲೂ ಕೌಶಲ ಮುಖ್ಯವಾಗುತ್ತದೆ. ಅಂತರಶಿಸ್ತೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕು. ಯಾವುದೇ ವಿಷಯದ ಬಗ್ಗೆ ಮಾಹಿತಿಗಿಂತಲೂ ಅದರ ಆಳ-ಅಗಲದ ಪರಿಕಲ್ಪನೆ ಸಿದ್ಧಿಸಿಕೊಳ್ಳಲು ವಿದ್ಯಾರ್ಥಿಗಳು ಗಮನಕೊಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಯುವ ಸಮುದಾಯದ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಆದರೆ, ಪ್ರತಿಭೆಗಳನ್ನು ತಮ್ಮದಾಗಿಸಿಕೊಳ್ಳಲು ದುಷ್ಟ ಶಕ್ತಿಗಳು ಕಾಯುತ್ತಿರುತ್ತವೆ. ಪ್ರತಿಭೆಯನ್ನು ವಿದ್ರೋಹದ ಕಾರ್ಯಕ್ಕೆ ಬಳಸಲಾಗುತ್ತಿದೆ. ಸಹಾಯ, ದಾನ ಪಡೆಯುವಾಗ ಎಚ್ಚರಿಕೆಯಿಂದ ಇರಬೇಕು. ಋಣದ ಭಾರಕ್ಕೆ ಸಿಲುಕಿ ಪ್ರತಿಭೆ ಬೇರೆಯವರ ಪಾಲಾಗಬಾರದು.ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್, ಯಹೂದಿಗಳ ಪ್ರತಿಭೆಯನ್ನು ಗೌರವಿಸದೆ ಅವಿವೇಕ ತೋರಿದ. ಯಹೂದಿಗಳ ಮಾರಣಹೋಮ ನಡೆಸಿದ್ದ. ಅದ್ದರಿಂದ, ಐನ್‌ಸ್ಟೈನ್ ಸೇರಿ ಸಾವಿರಾರು ಮಹಾನ್ ಪ್ರತಿಭಾವಂತರು ಅಮೆರಿಕದಲ್ಲಿ ಆಶ್ರಯ ಪಡೆದರು. ಆರ್ಥಿಕವಾಗಿ ತವಳುತ್ತಿದ್ದ ಅಮೆರಿಕ ಶಕ್ತಿಶಾಲಿ ದೇಶವಾಯಿತು ಎಂದು ಶ್ರೀಗಳು ಹೇಳಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ 70ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರನ್ನು ಸನ್ಮಾನಿಸಲಾಯಿತು.ಆದಿಚುಂಚನಗಿರಿ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ, ಶಾಸಕ ಎಂ.ಕೃಷ್ಣಪ್ಪ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಟ್ರಸ್ಟ್ ಅಧ್ಯಕ್ಷ ಸಿ.ವಿ.ದೇವರಾಜ್ ಮತ್ತಿತರರಿದ್ದರು.