- - ‘ಲೆಟ್ಸ್ ಟಾಕ್ ಲೈಫ್’ ಹೆಸರಿನಲ್ಲಿ ಆನ್‌ಲೈನ್ ವೇದಿಕೆ ಶುರು
- - ಸಮಸ್ಯೆ ಹಂಚಿಕೊಳ್ಳಲು ಅನಾಮಧೇಯ ಅವಕಾಶ
ಯುವಪೀಳಿಗೆ ಎದುರಿಸುತ್ತಿರುವ ಮಾನಸಿಕ ಒತ್ತಡ ಹಾಗೂ ತಳಮಳಗಳಿಗೆ ಪರಿಹಾರ ಸೂಚಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ‘ಲೆಟ್ಸ್ ಟಾಕ್ ಲೈಫ್’ (ಎಲ್‌ಟಿಎಲ್) ಎಂಬ ಆನ್‌ಲೈನ್ ವೇದಿಕೆ ರೂಪಿಸಿದೆ.
ಆಧುನಿಕ ಕಾಲಘಟ್ಟದಲ್ಲಿ ನಿರ್ಲಕ್ಷತೆ, ಒಂಟಿತನ, ಶಿಕ್ಷಣ, ಉದ್ಯೋಗ, ಕೌಟುಂಬಿಕ ಒತ್ತಡ, ಸಂಬಂಧಗಳ ನಡುವಿನ ಸಮಸ್ಯೆ, ಭವಿಷ್ಯದ ಬಗೆಗಿನ ಚಿಂತೆ ಯುವಜನರನ್ನು ಮಾನಸಿಕ ಸಮಸ್ಯೆಗೆ ದೂಡುತ್ತಿದೆ. ಇದರಿಂದಾಗಿ ಅವರು ತಮ್ಮ ನಿರ್ಧಾರಗಳು ಸರಿಯೋ? ತಪ್ಪೋ? ಎಂಬ ಗೊಂದಲದಲ್ಲಿ ಯಾರೊಂದಿಗೂ ಹೇಳಿಕೊಳ್ಳಲಾಗದೆ ಮೂಖವೇದನೆ ಅನುಭವಿಸುತ್ತಿದ್ದಾರೆ. ಮನೆಯವರು ಸ್ನೇಹಿತರೊಂದಿಗೆ ಸಮಸ್ಯೆ ಹೇಳಿಕೊಂಡರೆ ಹೊರೆಯಾಗಬಹುದು, ಅವಮಾನ ಆಗಬಹುದು, ಗೇಲಿ ಮಾಡಬಹುದು, ಬದಲಿಗೆ ತಮ್ಮ ಸಮಸ್ಯೆ ತಾವೇ ಪರಿಹರಿಸಿಕೊಳ್ಳಬೇಕು ಎಂಬ ಧೋರಣೆಯಿಂದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಎಂಬಂತೆ ‘ಲೆಟ್ಸ್ ಟಾಕ್ ಲೈಫ್’ ವೇದಿಕೆ ಯುವಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ.
ಲೆಟ್ಸ್ ಟಾಕ್ ಲೈಫ್ ವೇದಿಕೆಯು ಯುವಸ್ನೇಹಿ ಹಾಗೂ ಅನಾಮಧೇಯ ವೇದಿಕೆಯಾಗಿದೆ. ಇದರಲ್ಲಿ ಯುವಜನರು ತಮ್ಮ ಸಮಸ್ಯೆಗಳು ಹಾಗೂ ನಿರ್ಧಾರಗಳನ್ನು ಬರಹದ ರೂಪದಲ್ಲಿ ಹಂಚಿಕೊಳ್ಳಬಹುದು. ಈ ಸಂದೇಶಗಳಿಗೆ ಪ್ರತಿಕ್ರಿಯಿಸಲು ವೇದಿಕೆಯಲ್ಲಿ ಸಹಾನುಭೂತಿಯುಳ್ಳ ಸ್ವಯಂಸೇವಕರು, ತರಬೇತುದಾರರು ಇರುತ್ತಾರೆ. ಸಮಸ್ಯೆಗಳಿಗೆ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡುವ ಮೊದಲು ಮಾನಸಿಕ ಆರೋಗ್ಯ ತಜ್ಞರು ಪರಿಶೀಲಿಸುತ್ತಾರೆ. ವೇದಿಕೆಯು ಬಳಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಮಾಹಿತಿ ಪ್ರೋಸ್ಟ್ ಮಾಡಲು ಅನುಮತಿಸುತ್ತದೆ. ಇದಕ್ಕಾಗಿ ನೋಂದಾಯಿತ ಬಳಕೆದಾರರಿಗೆ ಹೆಸರಿನ ಬದಲಿಗೆ ast68200 ಮಾದರಿಯ ಯೂಸರ್ ಐಡಿ ಒದಗಿಸಲಿದೆ. ಇದರಲ್ಲಿ ಸಾರ್ವಜನಿಕರೂ ಭೇಟಿ ನೀಡಿ ಇತರರ ಪ್ರಶ್ನೆಗಳು ಹಾಗೂ ಅದರ ಉತ್ತರಗಳಿಂದ ತಮ್ಮ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಮಾನಸಿಕ ಸುರಕ್ಷತೆ:
ಈ ಅನಾಮಧೇಯ ವೇದಿಕೆಯು ಮಾನಸಿಕ ಸುರಕ್ಷತೆಯನ್ನು ಸೃಷ್ಟಿಸುತ್ತದೆ. ಸಾಮಾಜಿಕ ಪರಿಣಾಮಗಳ ಬಗ್ಗೆ ಚಿಂತಿಸದೆ ಯುವಜನರು ತಮ್ಮ ದುಃಖವನ್ನು ವ್ಯಕ್ತಪಡಿಸಬಹುದು. ಹಾಗಾಗಿ ಯುವಜನರನ್ನು ಆರೋಗ್ಯಕರವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹಾಗೂ ಅಗತ್ಯವಿದ್ದಾಗ ವೃತ್ತಿಪರ ಸಹಾಯ ಒದಗಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವ ಗುರಿಯನ್ನು ವೇದಿಕೆ ಹೊಂದಿದೆ ಎನ್ನುತ್ತಾರೆ ನಿಮ್ಹಾನ್ಸ್‌ನ ಐಸಿಎಂಆರ್ ವಿಜ್ಞಾನಿ ಅಭಿಷೇಕ್ ಕರಿಸಿದ್ದಿಮಠ.
ವೇದಿಕೆಗೆ ಮರುಚಾಲನೆ
‘ಲೆಟ್ಸ್ ಟಾಕ್ ಲ್ೈ’ವೇದಿಕೆ ಹೊಸದೇನಲ್ಲ. 3-4 ವರ್ಷಗಳ ಹಿಂದೆ ಸೈಕ್ ಕೇರ್ ಪೀರ್ ಸಪೋರ್ಟ್ ೆರಂ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ ಹೆಚ್ಚು ಜನರಿಗೆ ತಲುಪಿಸುವ ಸಲುವಾಗಿ ಐಐಐಟಿ ಬೆಂಗಳೂರು ಮೈಕ್ರೋಸ್‌ಟಾ ಇಂಡಿಯಾ ನೆರವಿನೊಂದಿಗೆ ಮರುವಿನ್ಯಾಸಗೊಳಿಸಿ ಹೊಸ ಹೆಸರಿನಲ್ಲಿ ಪುನರಾರಂಭಿಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಇದರ ಉಪಯೋಗ ಪಡೆದುಕೊಂಡಿದ್ದಾರೆ ಎಂದು ಅಭಿಷೇಕ್ ಕರಿಸಿದ್ದಿಮಠ ತಿಳಿಸಿದ್ದಾರೆ.
ಈ ವೇದಿಕೆಯಲ್ಲಿ ಕೇಳುವ ಪ್ರಶ್ನೆಗಳಿಗೆ ತರಬೇತಿ ಪಡೆದ ಸ್ವಯಂಸೇವಕರು ಮಾನಸಿಕ ಆರೋಗ್ಯ ತಜ್ಞರಿಂದ ಮಾರ್ಗದರ್ಶನ ಪಡೆದು ಉತ್ತರ ನೀಡಲಿದ್ದಾರೆ. ವೆಬ್‌ಸೈಟ್ ಮತ್ತು ಆ್ಯಂಡ್ರಾಯ್ಡಾ ಆ್ಯಪ್ ರೂಪದಲ್ಲಿ ಇದು ಲಭ್ಯವಿದ್ದು, ಮೊಬೈಲ್‌ನಲ್ಲಿ ‘ಲೆಟ್ಸ್ ಟಾಕ್ ಲೈಫ್ ಫೋರಂ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ಮೂಲಕವೂ ಉಪಯೋಗ ಪಡೆಯಬಹುದಾಗಿದೆ.
— ಅಭಿಷೇಕ್ ಕರಿಸಿದ್ದಿಮಠ, ವಿಜ್ಞಾನಿ- ಐಸಿಎಂಆರ್ ಉನ್ನತ ಸಂಶೋಧನಾ ಕೇಂದ್ರ, ನಿಮ್ಹಾನ್ಸ್
ಭಾರತೀಯ ಯುವ ಜನರ ಮಾನಸಿಕ ಆರೋಗ್ಯಕ್ಕಾಗಿ ಲೆಟ್ಸ್ ಟಾಕ್ ಲೈಫ್ ವೇದಿಕೆ ರೂಪಿಸಲಾಗಿದೆ. ಇದು ತಮ್ಮ ನೋವು, ಸಮಸ್ಯೆಗಳನ್ನು ಹಂಚಿಕೊಳ್ಳುವ ಮೂಲಕ ಮಾನಸಿಕ ಬಲ ಹಾಗೂ ಬೆಂಬಲ ಪಡೆಯಲು ಸಹಕಾರಿಯಾಗಿದೆ.
— ಡಾ. ಸೀಮಾ ಮೆಹ್ರೋತ್ರಾ, ಪ್ರೊಫೆಸರ್ (ಕ್ಲಿನಿಕಲ್ ಸೈಕಾಲಜಿ), ನಿಮ್ಹಾನ್ಸ್