ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಹಡಪದ ಅಪ್ಪಣ್ಣನವರ ವಚನ ಚಿಂತನ ಕಾರ್ಯಕ್ರಮವನ್ನು ಕಲಬುರಗಿ ಡಿಡಿಪಿಯು ಸುರೇಶ ಅಕ್ಕಣ್ಣ ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಪೂಜ್ಯ ಗಾಯತ್ರಿತಾಯಿ, ಪೂಜ್ಯ ಗಾಯತ್ರಿತಾಯಿ ಇತರರಿದ್ದರು.
- ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಬಣ್ಣನೆ
- ಬಸವಕಲ್ಯಾಣದಲ್ಲಿ ಶರಣು ಶರಣಾರ್ಥಿ ಸಮಾವೇಶ
ಬಸವಕಲ್ಯಾಣ: ನಿಜಸುಖಿ ಹಡಪದ ಅಪ್ಪಣ್ಣನವರು ಶ್ರೇಷ್ಠ ಶರಣರಾಗಿದ್ದರು. ಅವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಕ್ರಾಂತಿಕಾರಕ ಬದಲಾವಣೆ ಕುರಿತು ತಿಳಿಸಿರುವುದು ಅವಿಸ್ಮರಣೀಯ ಎಂದು ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಬಣ್ಣಿಸಿದರು.
ನಗರದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಹಡಪದ ಅಪ್ಪಣ್ಣನವರ ವಚನ ಚಿಂತನ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ಅಪ್ಪಣ್ಣನವರು ಗುರು ಬಸವಣ್ಣನವರ ಕಾರ್ಯದರ್ಶಿಯಾಗಿ ಬಸವಣ್ಣನವರಿಗೆ ಸರ್ವ ರೀತಿಯಿಂದಲೂ ಸಹಕರಿಸಿ ಅಜರಾಮರರಾದವರು. ಅಸಮ ಸಮಾಜದ ಶೋಷಣೆ ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹೋರಾಡಿದ ಬಸವಣ್ಣ- ಅಲ್ಲಮ, ಅಕ್ಕಮಹಾದೇವಿ, ಮಾಚಿದೇವ ಮುಂತಾದ ಶರಣರಂತಯೇ ಅಪ್ಪಣ್ಣನವರು ಪೂಜ್ಯನಿಯರು ಎಂದು ಹೇಳಿದರು.
ಕಲಬುರಗಿ ಪದವಿಪೂರ್ವ ಶಿಕ್ಷಣ ಇಲಾಖೆೆಯ ಉಪನಿರ್ದೇಶಕ ಸುರೇಶ ಅಕ್ಕಣ್ಣ ಉದ್ಘಾಟಿಸಿ ಮಾತನಾಡಿ, ಶಾಂತಿ, ಸಹಬಾಳ್ವೆ, ನೆಮ್ಮದಿ ಬದುಕಿಗೆ ಆಧಾರವಾಗಿರುವ ಶರಣ ಸಂಸತಿ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಪೂಜ್ಯ ಡಾ.ಗಂಗಾಂಬಿಕಾ ಅಕ್ಕನವರು ಬಸವತತ್ವ ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನಿಯ ಎಂದರು.
ಶ್ರೀ ಗುರುಬಸವ ಯೋಗಾಶ್ರಮದ ಪೂಜ್ಯ ಗಾಯತ್ರಿತಾಯಿ ಅನುಭಾವ ನೀಡಿ, ಅನುಭವ ಮಂಟಪ ಮತ್ತು ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣ ಆಧಾರ ಸ್ತಂಭವಾಗಿದರು. ಅವರ ಸುಮಾರು 251 ವಚನಗಳು ದೊರಕಿವೆ. ಬದುಕನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಶರಣ ದಂಪತಿಗಳಾದ ಅಪ್ಪಣ್ಣ ಲಿಂಗಮ್ಮನವರ ಹಿತನುಡಿಗಳು ಸರ್ವರಿಗೂ ದಾರಿ ದೀಪವಾಗಿವೆ ಎಂದರು.
ಅನುಭವ ಮಂಟಪದ ಶ್ರೀ ಗಂಗಾಂಧರ ದೇವರು ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಮಲ್ಲಿಕಾರ್ಜುನ ಮಠಪತಿ, ಹಡಪದ ಅಪ್ಪಣ್ಣ ಸಮಾಜದ ಮುಖಂಡ ದತ್ತಾತ್ರೆ ಮೂಲಗೆ, ಜಗದೇವಿ ಮೂಲಗೆ ಇದ್ದರು. ಹರಳಯ್ಯ ಸಮಾಜದ ಮೀನಾ ಜಾಧವ್ ಧ್ವಜಾರೋಹಣಗೈದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಭೋಸಗಾ ವಚನ ಸಂಗೀತ ಹಾಗೂ ಹಡಪದ ಅಪ್ಪಣ್ಣ ಮಹಾಶಕ್ತಿಕೂಟದವರು ಪ್ರಾರ್ಥನೆ ನಡೆಸಿಕೊಟ್ಟರು. ರೇಣುಕಾ ಹೋಗ್ತಾಪೂರೆ ಸ್ವಾಗತಿಸಿದರು. ಕವಿತಾ ರಾಜೋಳೆ ನಿರೂಪಣೆ ಮಾಡಿದರು. ಸೇವೆಯಿಂದ ನಿವೃತ್ತರಾದ ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶ ಸುರೇಶ ಅಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು.