ಬೆಂಗಳೂರು-ಮೈಸೂರು ಮೂಲಸೌಕರ್ಯ ಯೋಜನೆಯಲ್ಲಿ (ಬಿಎಂಐಸಿ) ಯೋಜನೆಯಲ್ಲಿ "ನೈಸ್' ಅನ್ನುವಂತದ್ದು ಏನೂ ಇಲ್ಲ. ಈ ಯೋಜನೆಯು ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿರಬಹುದು ಎಂದು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಯೋಜನೆ ನೆಪದಲ್ಲಿ ದಶಕಗಳಿಂದ ಭೂಮಿ ಕಳೆದುಕೊಂಡು ಪರಿಹಾರವೂ ಸಿಗದೆ ಕಂಗಾಲಾಗಿದ್ದ ರೈತರ ಜಮೀನಿನ ಅಧಿಸೂಚನೆಯನ್ನು ರದ್ದುಪಡಿಸಿ 2025ರ ಜುಲೈನಲ್ಲಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ಪ್ರೆೃಸ್ (ನೈಸ್) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಸಂವಿಧಾನ ಖಾತ್ರಿ ಪಡಿಸಿರುವ ಮೂಲಭೂತ ಹಕ್ಕು ಮತ್ತು ಪರಿಹಾರವನ್ನು ನೀಡದೆ ರೈತರ ಜಮೀನು ಹಾಗೂ ಅವರ ತಲೆಮಾರಿನ ಜೀವನೋಪಾಯವನ್ನು ದೋಚಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ರಕ್ಷಕನಾಗಿರಬೇಕಿದ್ದ ಸರ್ಕಾರವೇ, ಸಾರ್ವಜನಿಕ ಹಿತಾಸಕ್ತಿಯನ್ನು ಬಲಿಕೊಟ್ಟು ಖಾಸಗಿ ಸಂಸ್ಥೆಯ ಲಾಭಕ್ಕೆ ಹೇಗೆ ಸಾಥ್ ನೀಡಬಹುದು ಎಂಬುದಕ್ಕೆ ಈ ಯೋಜನೆ ಉದಾಹರಣೆ. ಇದು ಮೂಲಸೌಕರ್ಯ ಅಭಿವೃದ್ಧಿಯಲ್ಲ. ಬದಲಿಗೆ ಸಾಂವಿಧಾನಿಕ ಚೌಕಟ್ಟಿಗೆ ಎಸಗಿದ ದ್ರೋಹ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ:
1998 ರಿಂದ 2009 ರ ನಡುವೆ ಸಾವಿರಾರು ಎಕರೆ ಜಮೀನು ವಶಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ 23 ವರ್ಷಗಳು ಕಳೆದರೂ ರೈತರಿಗೆ ಪರಿಹಾರವನ್ನೇ ನೀಡಿರಲಿಲ್ಲ. ಇತ್ತ ಜಮೀನನ್ನು ಮಾರಾಟ ಮಾಡಲು, ಅಡಮಾನವಿಡಲು ಅಥವಾ ಕೃಷಿ ಮಾಡಲು ಸಾಧ್ಯವಾಗದೆ ಭೂಮಾಲೀಕರು ಸಂಕಷ್ಟದಲ್ಲಿದ್ದರು. ಈ ಭೂಸ್ವಾಧಿನ ಪ್ರಕ್ರಿಯೆಯನ್ನು ಪ್ರಶ್ನಿಸಿ 68ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ಸಂಬಂಧಿಸಿದ ಜಮೀನಿನ ಭೂಸ್ವಾಧಿನವನ್ನು ರದ್ದುಪಡಿಸಿ ಜಮೀನನ್ನು ಅವರಿಗೆ ಮರಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ℹ️ ಸ್ವತಂತ್ರ ತನಿಖೆ ಅಗತ್ಯ
ಈ ಯೋಜನೆಯ ಆರಂಭದಿಂದ ಈವರೆಗೆ ನಡೆದಿರುವ ಭೂಸ್ವಾಧಿನ ಪ್ರಕ್ರಿಯೆ, ಒಪ್ಪಂದಗಳು ಮತ್ತು ಕೋಟ್ಯಂತರ ರೂಪಾಯಿ ಹಣಕಾಸಿನ ವಹಿವಾಟಿನ ಬಗ್ಗೆ ಆಡಿಟ್ ಮತ್ತು ಸ್ವತಂತ್ರ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅವಲೋಕನ ಮಾಡಿದೆ. 111 ಕಿ.ಮೀ ಎಕ್ಸ್ಪ್ರೆಸ್ವೇ ಹಾಗೂ ಉಪನಗರಗಳನ್ನು ನಿರ್ಮಿಸುವ ಉದ್ದೇಶದಿಂದ ಜಮೀನು ಪಡೆಯಲಾಗಿತ್ತು. ಆದರೆ ಯೋಜನೆಯ ಪ್ರವರ್ತಕರು ಜಮೀನನ್ನು ರಿಯಲ್ ಎಸ್ಟೇಟ್ಗೆ ಬಳಸಿಕೊಂಡು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ, ಆದರೆ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಯೋಜನೆಯನ್ನು ಏಕೆ ರದ್ದುಪಡಿಸಿಲ್ಲ?:
ಯೋಜನೆಯ ಆರಂಭದ ಹಂತದಲ್ಲಿ ಮಾಡಿರುವ ಒಪ್ಪಂದದಂತೆ ಕಳೆದ 25 ವರ್ಷಗಳಲ್ಲಿ 111 ಕಿ.ಮೀ. ಎಕ್ಸ್ಪ್ರೆಸ್ವೇ ಮತ್ತು 5 ಉಪನಗರಗಳನ್ನು ನಿರ್ಮಿಸಲು ನೈಸ್ ಸಂಸ್ಥೆ ಸಂಪೂರ್ಣ ವಿಲವಾಗಿದೆ. ಒಪ್ಪಂದದ ಕರಾರುಗಳನ್ನು ಬಹಿರಂಗವಾಗಿ ಸಂಸ್ಥೆಯು ಉಲ್ಲಂಘಿಸಿದ್ದರೂ, ರಾಜ್ಯ ಸರ್ಕಾರವು ಈ ಒಪ್ಪಂದವನ್ನು ಏಕೆ ಮರುಪರಿಶೀಲಿಸುತ್ತಿಲ್ಲ ಅಥವಾ ರದ್ದುಪಡಿಸುತ್ತಿಲ್ಲ ಎಂದು ಸರ್ಕಾರದ ನಡೆಯನ್ನು ಆದೇಶದಲ್ಲಿ ನ್ಯಾಯಪೀಠ ಪ್ರಶ್ನಿಸಿದೆ.