- ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಯಿಂದಲೂ ತನಿಖೆ
ಜಿಗಣಿಯಲ್ಲಿ ಸೆರೆಸಿಕ್ಕ ಶಂಕಿತ ಉಗ್ರ ಪಶ್ಚಿಮ ಬಂಗಾಳದ ಅಸಾಪೂಲ್ ಮಲ್ಲಿಕ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡ ಮಂಗಳವಾರ ವಶಕ್ಕೆ ಪಡೆದು ನಾಲ್ಕು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಕಳೆದ ಎರಡು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ವಿಚಾರಣೆ ಬಳಿಕ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿ, ಕೆಲವು ಮಹತ್ವದ ಮಾಹಿತಿ ಉಗ್ರನಿಂದ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಸೇನೆ ಮತ್ತು ಭಾರತೀಯರ ಮೇಲೆಯ ಮೆಲೆ ಪ್ರತೀಕಾರದ ಸಂಚು ರೂಪಿಸಿರುವುದು ಅಷ್ಟೇ ಅಲ್ಲದೆ ತಹ್ರೀಕ್ ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಉಗ್ರನನ್ನು ಆ.11ರಂದು ರಾತ್ರಿ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ, 10ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಪೊಲೀಸರ ಕಷ್ಟಡಿಯಲ್ಲಿರುವಾಗಲೇ ಶಂಕಿತ ಉಗ್ರ ಮಲ್ಲಿಕನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಅಪ್ಘಾನಿಸ್ತಾನದ ಇಮ್ರಾನ್ ಅಹಿಂದರ್ ಜತೆ ಸಂಪರ್ಕ ಹೇಗಾಯಿತು? ಮಧ್ಯವರ್ತಿಗಳು ಯಾರಿದ್ದಾರೆ?, ಜಿಗಣಿಯಲ್ಲಿ ವಾಸವಾಗಿದ್ದ ವೇಳೆ ಮತ್ತೊಬ್ಬ ಶಂಕಿತ ಉಗ್ರ ಇಂಜಿಮಾಮ್ ಉಲ್‌ಹಕ್ ಯಾರು? ಎಲ್ಲಿದ್ದಾನೆ ಎಂಬ ಬಗ್ಗೆ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಹಸ್ತಾಂತರಕ್ಕೆ ಸೂಚನೆ:
ಶಂಕಿತ ಉಗ್ರ ಮಲ್ಲಿಕ್ ಬಂಧನದ ವೇಳೆ ಆತನ ಮೊಬೈಲ್‌ನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಹಾಗೂ ಮೊಬೈಲ್ ರಿಟ್ರಿವ್ ಆದ ನಂತರ ಅದನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದಾರೆ. ವಾರದ ಬಳಿಕ ಮಲ್ಲಿಕ್ ಮೊಬೈಲ್ ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರಲಿದೆ ಎನ್ನಲಾಗಿದೆ.
ಕೇಂದ್ರ ಮತ್ತು ರಾಜ್ಯ ತಂಡದಿಂದ ವಿಚಾರಣೆ:
ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ ಅಧಿಕಾರಿಗಳು ಉಗ್ರ ಮಲ್ಲಿಕ್‌ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿವೆ. ಉಗ್ರನ ಹೇಳಿಕೆಯನ್ವಯ ಹಾಗೂ ತಾಂತ್ರಿಕ ಮಾಹಿತಿ ಆಧಾರದ ಮೇಲೆ ಆತನು ಯಾರೊಂದಿಗೆ ಮತ್ತು ಯಾವ ಯಾವ ದೇಶಗಳ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬುದರ ಮಾಹಿತಿ ಕಲೆ ಹಾಕಿದ್ದಾರೆ. ಉಗ್ರನ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ, ಠಾಣೆ ಇನ್‌ಸ್ಪೆಕ್ಟರ್ ಅವರಿಂದ ಮಾಹಿತಿ ಪಡೆದಿರುವ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಆತನ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಪ್ಘಾನಿಸ್ಥಾನ, ಪ್ಯಾಲೆಸ್ತೇನ್ ಮುಸ್ಲಿಂರೊಂದಿಗೆ ಈತನಿಗೆ ಇರುವ ನಂಟಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಅ್ಘಾನಿಸ್ತಾನದ ಇಮ್ರಾನ್ ಅಹಿಂದರ್ ಎಂಬಾತನೊಂದಿಗೆ ಸೇರಿಕೊಂಡು ಪಾಕಿಸ್ತಾನ ಸೇನೆಗೆ ತೊಂದರೆ ನೀಡಿದರೆ ಅದರ ಆರೋಪ ಭಾರತೀಯ ಸೇನೆ ಮೇಲೆ ಬರಲಿದೆ ಎಂಬ ಸಂಚು ರೂಪಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ.