ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾಲಿಂಗಪುರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಪಿಐ ಆರ್.ಆರ್.ಪಾಟೀಲ ಮಾತನಾಡಿದರು. ಈಶ್ವರ ಶೆಟ್ಟರ, ಮಹೇಶ ಅಂಗಡಿ, ಮಹೇಶ ಮನ್ನಯ್ಯನವರಮಠ ಇತರರಿದ್ದರು. 
ರಾಜ್ಯ

ಪ್ರಜಾಪ್ರಭುತ್ವ ಉಳಿವಿಗೆ ಪತ್ರಿಕೆಗಳು ಅತ್ಯಗತ್ಯ

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಆರ್.ಆರ್.ಪಾಟೀಲ ಹೇಳಿಕೆ
  • ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಮಹಾಲಿಂಗಪುರ: ಭಾವನಾ ಜೀವಿಗಳು ಸಾಹಿತಿಗಳಾಗಿರುತ್ತಾರೆ. ಸಮಾಜದಲ್ಲಿ ಅರಿವು ಮೂಡಿಸುತ್ತಿರುವ ಪತ್ರಕರ್ತರೂ ಕೂಡಾ ಭಾವನಾ ಜೀವಿಗಳು ಎಂದು ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್.ಪಾಟೀಲ ಹೇಳಿದರು.
ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗಗಳು ದಾರಿ ತಪ್ಪದಂತೆ ಹದ್ದಿನ ಕಣ್ಣಿಟ್ಟು ಕಾಯುವವರು ಪತ್ರಕರ್ತರು. ಇಂದು ಪತ್ರಿಕೆಗಳಿಗೆ ಫೇಕ್ ಮೀಡಿಯಾ ಒಂದು ಸವಾಲಾಗಿದೆ. ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೆಗಳು ಅವಶ್ಯ. ಸಮಾಜದ ಅಂಕುಡೊಂಕುಗಳನ್ನು ವಿಶ್ಲೇಷಿಸುತ್ತಿರುವ ಪತ್ರಕರ್ತರ ಜ್ಞಾನ ಮತ್ತು ದುಡಿಮೆಗೆ ತಕ್ಕ ಫಲ ಸಿಗುತ್ತಿಲ್ಲ. ಸಮಾಜ, ಸರ್ಕಾರ ಅವರ ಬೆನ್ನಿಗೆ ನಿಲ್ಲಬೇಕು ಎಂದರು.
ಇಟಗಿ ಮಹೇಶ್ವರ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಗಂಗಾಧರ ಅವಟೇರ ಮಾತನಾಡಿ, ಪತ್ರಕರ್ತರು ತಮ್ಮ ಭ್ರಮೆಗಳನ್ನು ಸಾರ್ವಜನಿಕರ ಮೇಲೆ ಹೇರಬಾರದು. ಲೋಕಾನುಭವದಿಂದ ವ್ಯಕ್ತಿತ್ವ ಗಟ್ಟಿಯಾಗುತ್ತದೆ. ವರ್ಷವಿಡೀ ಸಮಾಜ ಸೇವೆ ಮಾಡುವ ಪತ್ರಕರ್ತರ ದಿನಾಚರಣೆಯನ್ನು ಸಮಾಜವೇ ಮಾಡಬೇಕು ಎಂದರು.
ಸಂಘದ ಸದಸ್ಯರಿಗೆ ಗುರುತಿನ ಕಾರ್ಡ್ ವಿತರಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಹೇಶ ಅಂಗಡಿ, ಸಂಘದ ಸದಸ್ಯತ್ವ ಬ್ಲಾಕ್‌ಮೇಲ್‌ಗೆ ಉಪಯೋಗವಾಗಬಾರದು, ಸಮಾಜಮುಖಿ ಕೆಲಸಗಳಿಗೆ ಉಪಯೋಗವಾಗಬೇಕು ಎಂದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ಮಾತನಾಡಿದರು. ತಾಲೂಕು ಘಟಕದ ಪದಾಧಿಕಾರಿಗಳಾದ ಎಸ್.ಎಸ್. ಈಶ್ವರಪ್ಪಗೋಳ, ಇಲಾಹಿ ಜಮಖಂಡಿ ಅವರನ್ನು ಸನ್ಮಾನಿಸಲಾಯಿತು.
ಕಾನಿಪ ಸ್ಥಳೀಯ ಘಟಕದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ, ಕಾನಿಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಮೋರೆ, ಕಾರ್ಯದರ್ಶಿ ಮೀರಾ ತಟಗಾರ ಇದ್ದರು.
ಮಹಾಲಕ್ಷ್ಮೀ ಗುಳದಳ್ಳಿ ಪ್ರಾರ್ಥಿಸಿದರು. ರಾಜೇಂದ್ರ ನಾವಿ ಸ್ವಾಗತಿಸಿದರು. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು. ಇಲಾಹಿ ಜಮಖಂಡಿ ವಂದಿಸಿದರು.